ಮೀನಿಗೆ ತಿಳಿಯದು ನೀರೇನೆಂದು
ನೀರಿಗೆ ತಿಳಿಯದು ಮೀನೇನೆಂದು
ಮೀನೊಳಗೆ ನೀರು
ನೀರೊಳಗೆ ಮೀನು
ನೀರು ಮೀನುಗಳೆರಡು ನಿನ್ನೊಳಗೊ ಬ್ರಹ್ಮ
ಬೆಂಕಿಗೆ ತಿಳಿಯದು ಉರಿಯೇನೆಂದು
ಉರಿಗೆ ತಿಳಿಯದು ಬೆಂಕಿಯೇನೆಂದು
ಬೆಂಕಿಯೊಳಗೆ ಉರಿ
ಉರಿಯೊಳಗೆ ಬೆಂಕಿ
ಬೆಂಕಿ ಉರಿಗಳೆರಡು ನಿನ್ನೊಳಗೊ ಬ್ರಹ್ಮ
ಗಾಳಿಗೆ ತಿಳಿಯದು ಸುಳಿಯೇನೆಂದು
ಸುಳಿಗೆ ತಿಳಿಯದು ಗಾಳಿಯೇನೆಂದು
ಗಾಳಿಯೊಳಗೆ ಸುಳಿ
ಸುಳಿಯೊಳಗೆ ಗಾಳಿ
ಗಾಳಿ ಸುಳಿಗಳೆರಡು ನಿನ್ನೊಳಗೊ ಬ್ರಹ್ಮ
ಮುಗಿಲಿಗೆ ತಿಳಿಯದು ಹನಿಯೇನೆಂದು
ಹನಿಗೆ ತಿಳಿಯದು ಮುಗಿಲು ಏನೆಂದು
ಮುಗಿಲೊಳಗೆ ಹನಿ
ಹನಿಯೊಳಗೆ ಮುಗಿಲು
ಮುಗಿಲು ಹನಿಗಳೆರಡು ನಿನ್ನೊಳಗೊ ಬ್ರಹ್ಮ
ಹೂವಿಗೆ ತಿಳಿಯದು ಪರಿಮಳವೇನೆಂದು
ಪರಿಮಳಕೆ ತಿಳಿಯದು ಹೂವು ಏನೆಂದು
ಹೂವೊಳಗೆ ಪರಿಮಳ
ಪರಿಮಳದೊಳಗೆ ಹೂವು
ಹೂವು ಪರಿಮಳಗಳೆರಡು ನಿನ್ನೊಳಗೊ ಬ್ರಹ್ಮ
ಗಗನಕೆ ತಿಳಿಯದು ಭುವನವೇನೆಂದು
ಭುವನಕೆ ತಿಳಿಯದು ಗಗನವೇನೆಂದು
ಗಗನದೊಳಗೆ ಭುವನ
ಭುವನದೊಳಗೆ ಗಗನ
ಗಗನ ಭುವನಗಳೆರಡು ಬ್ರಹ್ಮಾಂಡದೊಳಗೊ ಬ್ರಹ್ಮ
*****


















