ಮಕರಂದವಿಲ್ಲದ ಹೂವಿನಲ್ಲಿ
ದುಂಬಿಗೇನಿದೆ ಕೆಲಸ?
ರಸವಿಲ್ಲ; ಸರಸವಿಲ್ಲ
ಬರೀ ನೀರಸ ಬದುಕು
ಎಲೆ ಕಳೆದುಕೊಂಡ ಮರದಲ್ಲಿ
ಹಕ್ಕಿಗಾವ ಆಸಕ್ತಿ?
ಫಲವಿಲ್ಲ; ಒಂದಿಷ್ಟು ಛಲವಿಲ್ಲ
ಬಲ ಕಳೆದು ಹೋದ ಬದುಕು
ನೀರಿಲ್ಲದ ತೊರೆ ಸೆಳೆಯಬಹುದೇ
ತನ್ನ ಕಡೆಗೆ ಜನರನ್ನು?
ಅದರಲ್ಲಾವ ಹುಮ್ಮಸ್ಸಿದೆ
ಛಲವಿಲ್ಲ; ಚಲನೆಯಿಲ್ಲ
ಕನಸ್ಸಿಲ್ಲದ ರಾತ್ರಿಯೇನು ಚಂದ
ಯುವ ಮನಸ್ಸುಗಳಿಗೆ
ಸ್ವಪ್ನವಿಲ್ಲದ ನಿದಿರೆ ನೀಡುವುದೇ
ಮನಸ್ಸಿಗೆ ಮುದವನ್ನು?
ಭಾವವಿಲ್ಲದ ಕವನ
ಜೀವವಿಲ್ಲದ ಜೀವನದಂತೆ
ಮುದನೀಡದ
ಅಪರಿಪೂರ್ಣತೆಯ ಪ್ರತಿಬಿಂಬ
*****


















