ಗಾಢ ಮೌನ ಆವರಿಸಿದರೆ
ಕರಾಳ ಕಾರಿರುಳ ಕತ್ತಲೆಗೆ
ಹೆದರುತ್ತೇನೆ ಬಹಳ
ಮೌನವನು ಸೀಳಿ ಬರುವ
ಆ ಆಕ್ರಂದದ ಕೂಗು
ಭಯಂಕರ ಸ್ಫೋಟದ ಶಬ್ದ
ಮೈ ಮನಗಳ ಸುಳಿಯಲ್ಲಿ
ನಡುಕ ಹುಟ್ಟಿಸುತ್ತದೆ.
ಮಧ್ಯ ರಾತ್ರಿಯ ಕರಾಳ
ಕತ್ತಲೆಯ ಗಾಢ ಮೌನದ
ಗರ್‍ಭ ಸೀಳಿ ಹೊರಬಂದ
ಕರುಳು ಹಿಂಡುವ ಕೂಗಿಗೆ
ಬೆದರದೇ ಬೆಚ್ಚದೆ ಆ ಪೋರ
ಹೆಣ ರಾಶೀಯ ಮೇಲೆ ನಿಂತು
ಕೂಗುತ್ತಿದ್ದ- ಓ! ಪಾತಕಿಗಳೇ
“ಹೂಗಳ ಕೈಗೆ ಕತ್ತಿ ನೀಡಿದರೇನು?
ರಕ್ತದ ಹೊಳೆಯಲ್ಲಿ ಹಡಗು ನಡೆಸಿದರೇನು?
ಹೆಣಗಳ ರಾಶಿ ಹಾಕಿದರೇನು?
ನನ್ನ ಇಡೀ ವಂಶವಿನ್ನೂ ಬಾಕಿಯಿದೆ
ಮನೆ ಹೊತ್ತಿ ಉರಿದರೇನು?
ಮಂದಿರದ ದೀಪವನ್ನೂ ಬೆಳಗುತ್ತಿದೆ.
ಮೀನಾರದ ಅಜಾನ್ ಕೇಳುತ್ತಿದೆ.
ಬದುಕುವ ಭರವಸೆ ನೀಡುತ್ತಿದೆ.”
ಡಿಸೆಂಬರ್ ಆರು ಬಂತೆಂದರೆ
ಕರುಳು ಹಿಂಡುತ್ತದೆ- ಸತ್ತ
ನಿರಪರಾಧಿ ಜೀವಗಳ ನೆನೆದು
ಮನಸು ಮಮ್ಮಲ ಮರಗುತ್ತದೆ.
ಕತ್ತಲೆಯ ಕಾಳ ರಾತ್ರಿಯಲಿ
ಮೌನ ಸೀಳಿ ಬರುವ ಆಕ್ರಂದನಕೆ
ಭೀತಿಯಿಂದ ಜೀವ ಬೆದರುತ್ತದೆ.
*****