ಹೌದು; ನಾನು ಬಡವಿ
ಝಗ ಝಗಿಸುವ
ಉಡುಗೆ ತೊಟ್ಟರೂ
ನಿಮ್ಮ ಪಟ್ಟಣಗಳು
ಬತ್ತಲೆಯಾಗಿವೆ ನೋಡಿ.
ಹೂಮನಸಿನ ನನಗೆ
ಹರಿದ ಸೀರೆಯೇ ಗತಿ
ಎದೆ ಸೀಳಿ ಹೆಕ್ಕಿದರೂ
ಅಕ್ಷರಗಳ ಸುಳಿವಿಲ್ಲ
ಖುರಾನು ಪವಿತ್ರ
ಕಣ್ಣಿಗೊತ್ತಿಕೊಳ್ಳುವೆ
ಮುಟ್ಟದಿರಿ ಮೈಲಿಗೆಯಾದೀತು
ತೆಗೆದಿಡುವೆ ಮೇಲೆ
ಶೋಕೇಸಿನ ವಸ್ತುವಿನಂತೆ
ಕಾವೇರಿಯ ತಟದಲ್ಲಿ
ಅಕ್ಕಿ ನೀರು ಉಪ್ಪು ರಾಗಿ
ಉಂಡವಳು ನಾನು
ಇಂದು ಮಾದೇಗೌಡರ
ಮಗಳ ಮದುವೆಗೆ
ಕುಂಕುಮ ಕೊಳ್ಳುತ್ತಿರುವೆ
ಮೊದಲು ಮನೆಯಲ್ಲಿ ಬಿದ್ದಿರುವ
ನನ್ನ ಮಗಳ ಶವಕ್ಕೆ
ದಫನ್ ಮಾಡಲು
ಕಫನ್ ಎಲ್ಲಿಂದ ತರಲಿ?
ಹೌದು ನಾನು ಬಡವಿ.
*****