ಉಗ್ರನೊಳಗುಗ್ರನ ಶಾಂತನೊಳು ಶಾಂತನ
ಉದಾಸೀನನೊಳುದಾಸೀನನನ್ನು
ಒಲಿವವರೊಳೆತ್ತುವನ ಹಗೆವವರೊಳಿಳಿಸುವನ
ಇಂತೆಲ್ಲಪರಿಯೊಳೂ ಕಾಂಬನನ್ನು
ಅದು ಅವನು ಅವಳೆಂಬ ಬಗೆಬಗೆಯ ನೆಲೆಯೊಳಗೆ
ಸೊಗದುಕ್ಕಗಳ ನನಗೆ ತೋರುತಿಹನ
ಕುರಿತು ಚಿಂತಿಸೆ ಬೆರಗ ತರುವವನ ಎಂತು ನಾ
ಮರೆವೆ ಸಕಲಾಂತಸ್ಥವಿಪುಲಮುಖನ?
ಅವಗೆ ನಾನೀ ಮೂಲೆಯೊಳಗಾದೆ ಭವಲೀಲೆಯುದ್ವೀಕ್ಷಣಗವಾಕ್ಷ
ಎನ್ನ ಹಂಕೃತಿಪದದೊಳಿದನೆಲ್ಲ ನಿರುಕಿಸುತ ಬಿನದಗೊಳೆ ಸರ್ವಪಕ್ಷ.
*****


















