ಕೆಲವು ದೇಶಗಳು ರಶಿಯದ ಹಾಗೆ ಬಹಳ ಬೃಹತ್ತಾಗಿ
ಕೆಲವು ಮಾಲಿಯ ಹಾಗೆ ಸಂಕ್ಷಿಪ್ತ
ದೊಡ್ಡ ದೇಶದ ಜನ ಒಬ್ಬರಿಗೊಬ್ಬರು ಅಪರಿಚಿತ
ಒಂದು ಕೊನೆಯಿಂದ ಇನ್ನೊಂದು ಕೊನೆ ತನಕ
ತಲುಪಲು ದಿನಗಳು ವಾರಗಳು ಮಾಸಗಳು ಬೇಕು
ಪ್ರತಿ ಯಾತ್ರೆಯೂ ಒಂದು ಮಹಾಯಾತ್ರೆ
ಅಥವಾ ಶಿಕ್ಷೆ
ಮೋಸ್ಕೋದಿಂದ ಸೈಬೀರಿಯಾಕ್ಕೆ
ಕವಿಗಳು ಹೋದರು ಕ್ರಾಂತಿಕಾರಿಗಳು ಹೋದರು
ಚಿಕ್ಕ ದೇಶಗಳಲ್ಲಿ ಎಲ್ಲರಿಗೆ ಎಲ್ಲರೂ ಗೊತ್ತು
ಸುದ್ದಿಯೆಂದರೆ ಅದು ಬಾವಿಕಟ್ಟೆಯಲಿ ನೆರೆಕರೆಯ ಪಿಸುಮಾತು
ಸಾಗುವುದಕ್ಕೆ ಆರಂಭ ಅಂತ್ಯವೆಂಬುದಿಲ್ಲ
ಅದು ಗದ್ದೆ ಸುತ್ತಿದ ಹಾಗೆ ನಮ್ಮ ಹಳ್ಳಿಯಲ್ಲಿ ದಿನಾ
ದೊಡ್ಡ ದೇಶಗಳಲ್ಲಿ ಏಕ ಕಾಲಕ್ಕೆ ಒಂದೆಡೆ ಬೀಳುವುದು ಹಿಮ
ಇನ್ನೊಂದೆಡೆ ಬಿಸಿಲ ಝಳ
ಬೆಟ್ಟದ ತಪ್ಪಲಲ್ಲಿ ಕುರಿಗಳ ಹಿಂಡು
ಕರಾವಳಿಯಲ್ಲಿ ಬೆಸ್ತರ ದಂಡು
ಅವರ ಭಾಷೆಗಳು ಬೇರೆ ಅರ್ಥವಾಗುವುದು ಸ್ವಲ್ಪ ಸ್ವಲ್ಪ
ಚಿಕ್ಕ ದೇಶಗಳಲ್ಲಿ ಹವೆಯೊಂದೇ ಭಾಷೆಯೊಂದೇ
ಉಡುತೊಡುವ ರೀತಿ ಒಂದೇ ಊಟ ಒಂದೇ
ಚರಿತ್ರೆ ಹಣ್ಣು ಕತ್ತರಿಸುವಂತೆ ಕತ್ತರಿಸಿ ಇಡಲಿಲ್ಲ
ಮಾನವ ಜನಾಂಗವನ್ನು ಒಂದೆ ತಾಟಿನಲ್ಲಿ ನೀಟಾಗಿ
ನದಿಯೂ ಹರಿಯಲಿಲ್ಲ ನೇರ ಗೆರೆಗಳಲ್ಲಿ ಪರ್ವತಗಳೂ
ಇದ್ದುವು ತಮ್ಮ ಖುಷಿಯಲ್ಲಿ
ಸರಿಪಡಿಸುವ ಎಲ್ಲ ಪ್ರಯತ್ನಗಳೂ ತತ್ತರಿಸಿ ಬೀಳುತ್ತಿವೆ
ಸರಿ ಯಾವುದು ತಪ್ಪು ಯಾವುದು ಎಂದು ಗೊತ್ತಿಲ್ಲದಿರುತ್ತ
ವಲಸೆ ಬಂದ ಹಕ್ಕಿಗಳೇ
ನೀವೇನು ಹೇಳುವಿರಿ ಎಷ್ಟು ದೇಶಗಳ ಕಂಡವರು
ಮಾತಾಡದೆ ಇರುವಿರಿ
*****


















