ಮಹಾನಗರಗಳ ಕಟ್ಟುವವರು
ಬೀದಿಯಲ್ಲಿ ಮಲಗುವವರು
ಮನೆಮನೆಯ ಮನೆಗೆಲಸ ಮಾಡಿ
ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡವರು
ಎಲ್ಲಿಂದಲೋ ಬಂದವರು
ಎಲ್ಲಿಯೂ ನೆಲೆ ಇಲ್ಲದವರು.
ತರಕಾರಿ, ಬೇಳೆ, ಕಾಳು, ಅಕ್ಕಿ ಬೆಲೆ ಗಗನಕ್ಕೇರಿ
ಕೊಳ್ಳಲು ಸಾಧ್ಯವಾಗದ ಸ್ಥಿತಿಯವರು
ಮಳೆಯೂ ಇಲ್ಲ ಬೆಳೆಯೂ ಇಲ್ಲದ ಬೆಂಗಾಡಿನಿಂದ
ಉತ್ತರದ ಗಾಳಿಯಲ್ಲಿ ಗುಳೆ ಬಂದ ಇವರು
ಎಲ್ಲಿಂದಲೋ ಬಂದವರು
ಎಲ್ಲಿಯೂ ನೆಲೆ ಇಲ್ಲದವರು.
ಮನೆಯ ಗಚ್ಚು, ಗಾರೆ ಕೆಲಸ ಮುಗಿವವರೆಗೂ
ಅಲ್ಲಿಯೇ ಠಿಕಾಣಿ ಹೂಡಿ ಮಕ್ಕಳು ಬೀದಿಪಾಲು
ಇವರ ಹೆಣ್ಣು ಮಗು ಕಾಣೆಯಾಗುತ್ತದೆ
ಹರೆಯದ ಹೆಣ್ಣು ಹುಡುಗಿಯೂ ಕಾಣೆಯಾಗುತ್ತಾಳೆ
ಪೋಲೀಸರಿಗೆ ವರದಿಯೂ ಆಗುವುದಿಲ್ಲ
ಎಲ್ಲಿಂದಲೋ ಬಂದವರು
ಎಲ್ಲಿಯೂ ನೆಲೆ ಇಲ್ಲದವರು.
ಪುರುಷರಿಗೂ ಮೀರಿಸುವ ದುಡಿಮೆಯವರು
ಇಟ್ಟಿಗೆ, ಸಿಮೆಂಟು, ಕಲ್ಲು, ಸಲಕರಣೆ ಎತ್ತುವವರು
ಗೇಣು ಹೊಟ್ಟೆಗಾಗಿ ಎಲ್ಲ ಸಹಾಸ ಮಾಡುವವರು
ಇವರಿಗಿಲ್ಲ ಪೆನ್ ಷನ್, ರಿಟಾಯರ್ಮೆಂಟುಗಳು
ಇವರೆಂದಿಗೂ ಸಾಹಸ ಪ್ರಶಸ್ತಿ ಪಡೆದಲಾರದವರು
ಎಲ್ಲಿಂದಲೋ ಬಂದವರು
ಎಲ್ಲಿಯೂ ನೆಲೆ ಇಲ್ಲದವರು.
ಬಯಲು ಆಲಯದೊಳಗೆ ನೆಲೆ ನಿಂತು
ಶೌಚ, ಬಚ್ಚಲುಗಳಿಲ್ಲದ ಟೆಂಟಿನಲ್ಲಿ ಬದುಕು
ಇವರಿಗಿಲ್ಲ ಆಧಾರ, ರೇಶನ್, ಚುನಾವಣಾ ಕಾರ್ಡುಗಳು
ಈ ಕಟ್ಟಡ ಮುಗಿದ ಬಳಿಕ ಮತ್ತೊಂದು
ಅಲೆಮಾರಿಗಳಿಗಿಲ್ಲ ನೆಮ್ಮದಿಯ ನಾಳೆಗಳು.
ಎಲ್ಲಿಂದಲೋ ಬಂದವರು
ಎಲ್ಲಿಯೂ ನೆಲೆ ಇಲ್ಲದವರು
*****


















