ಬಹಳ ಹಿಂದೆ- ಶಿರಡಿಯಲ್ಲಿ ಮೃತ್ಯುಂಜಯನೆಂಬ ಸ್ವಾಮಿ ಇದ್ದ. ಇವನು “ನಾನು ಶಿರಡಿ ಸಾಯಿ ಬಾಬಾರ ಅವತಾರ ಪುರುಷ” ನೆಂದು ಜನರಿಗೆಲ್ಲ ಹೇಳುತ್ತಾ ಮುಗ್ಧ ಜನರನ್ನು ಹೆದರಿಸುತ್ತಾ, ನಂಬಿಸುತ್ತಾ, ವಂಚಿಸುತ್ತಾ ಸುಖವಾಗಿ ಕಾಲ ಕಳೆಯುತ್ತಾ ಇದ್ದ.
ಹೀಗಿರಲಾಗಿ- ಐದಾರು ಶಿಷ್ಯರೊಡಗೂಡಿ ಒಮ್ಮೆ ಫಂಡಾರಾಪುರಕ್ಕೆ ಭೇಟಿ ನೀಡಿದ. ಇದಕ್ಕಿದ್ದಂತೇ ಗುಡಿಗೆ ಪ್ರವೇಶಿಸಿ ಅಲ್ಲಿನ ಪೂಜಾರಿಗಳನ್ನು ಬೆಚ್ಚಿ ಬೀಳಿಸಿದ.
ಅಲ್ಲಿನ ಪೂಜಾರಿಗಳೆಲ್ಲ ಸೇರಿ “ಸ್ವಾಮಿ ನೀವು ಶಿರಡಿ ಸಾಯಿ ಬಾಬಾರವರ ಹೆಸರು ಹೇಳಿಕೊಂಡು ಸುಮ್ಮನೇ ನಮ್ಮನ್ನೆಲ್ಲ ಅವಮಾನಿಸುವುದು ಬಾಯಿ ಜೋರು ಮಾಡುವುದು ಸೇವೆ, ಪ್ರಸಾದ, ತೀರ್ಥ, ಫಲಹಾರ ಸ್ವೀಕರಿಸುವುದು ವಾರದಿಂದ ಮಠದಲ್ಲೇ ಉಳಿಯುವುದು, ನಿಮ್ಮ ಜೊತೆಗೆ ಈ ಐದಾರು ಶಿಷ್ಯರನ್ನು ನಿತ್ಯ ಸಾಕುವುದು ನಮ್ಮಿಂದಾಗದು” ಎಂದು ವಿನಂತಿಸಿದರು.
“ಎಲೈ ಪಾಪಿಗಳೆ… ನನ್ನನ್ನೇ ಅನುಮಾನದಿಂದ ಬೇಸರದಿಂದ ಕೇವಲವಾಗಿ ನೋಡುತ್ತಿದ್ದೀರಾ? ನಾನು ಭಗವಂತನ ಅವತಾರ! ನೀವು ನರಕಕ್ಕೆ ಹೋಗುವಿರಿ. ನನ್ನ ಶಕ್ತಿ, ಭಕ್ತಿ, ಮಹಿಮೆ ತಿಳಿಯದೆ, ಹೀಗೆ ಅವಮಾನಿಸುತ್ತಿರುವಿರಿ” ಎಂದ ಮೃತ್ಯುಂಜಯ ಸ್ವಾಮಿ.
“ಸ್ವಾಮಿ ಐದಾರು ದಿನದಿಂದ ನಿಮ್ಮ ನಡವಳಿಕೆಯನ್ನು ನೋಡುತ್ತಿದ್ದೇವೆ. ನಾವು ಇಲ್ಲೆ ೫೦ ವರ್ಷಗಳಿಂದ ದೇವರ ಸೇವಕರಾಗಿದ್ದೇವೆ. ನಮಗೇ ದೇವರ ಅನುಗ್ರಹವಿಲ್ಲ. ನೀವು ನಮಗೆಲ್ಲ ಉಪದೇಶ ಮಾರ್ಗದರ್ಶನ ಮಾಡುತ್ತಿಲ್ಲ. ಸ್ನಾನವಿಲ್ಲ, ಪೂಜೆಯಿಲ್ಲ. ಒಂದು ಮಂತ್ರವಿಲ್ಲ… ಭಕ್ತಿಯಿಲ್ಲ…. ಶ್ರದ್ಧೆಯಿಲ್ಲ… ನಿಮ್ಮನ್ನು ಯಾವ ಮಠದ ಸ್ವಾಮಿಗಳೆಂದು ಹೇಗೆ ನಂಬುವುದು?” ಮಠದ ಹಿರಿಯ ಸ್ವಾಮಿ ಅಂದ.
“ಎಲೈ ಮೂಢ ನನ್ನ ಕಾವಿ ರುದ್ರಾಕ್ಷಿ ಕಮಂಡಲ ತೇಜಸ್ಸು ಹೆಸರು-ದಪ್ಪ ಉದ್ದ ನನ್ನ ತಿರುಗಣೆ-ಪಾದುಕೆ ವೇಷ ಭೂಷಣಗಳೂ ನಿನಗೆ ಕಾಣುತ್ತಿಲ್ಲವೇ? ನಾನೇ. ನಾನೇ. ಭಗವಂತನ ಅವತಾರ ಪುರುಷ ನನ್ನನ್ನು ಅವಮಾನಿಸಿದರೆ ನಿಮಗೆ ನರಕ ಪ್ರಾಪ್ತಿ ಖಂಡಿತವೆಂದು ಮೃತ್ಯುಂಜಯ ಸ್ವಾಮಿ ಗುಡುಗಿದ.
“ಸ್ವಾಮಿಗಳೆ ನಿಮ್ಮನ್ನು ನೀವು ಅವತಾರ ಪುರುಷ ಎನ್ನುವುದಲ್ಲ! ನಿಮ್ಮ ಮಹಿಮೆ ಪವಾಡ ಮಾತು ಕೃತಿ ವಿದ್ವತ್ತು ಪಾಂಡಿತ್ಯ ನಮಗೆ ತಿಳಿಯಬೇಕು. ನೀವು ಡೊಂಗಿ ಹೊಡೆಯುವುದಲ್ಲ! ನಿಮ್ಮ ವರ್ತನೆ ಸರಿಯಿಲ್ಲ. ಅನುಮಾನಕ್ಕೆ ಎಡೆ ಮಾಡುವುದು” ಎಂದ ಮಠದ ಸ್ವಾಮಿ.
“ಸರಿ ನನ್ನನ್ನು ಅನುಮಾನಿಸಿದ ಮೇಲೆ ನಾನಿಲ್ಲಿ ಇರುವುದಿಲ್ಲ! ಶಿಷ್ಯರೇ ನಡಿಯಿರಿ. ಗಂಟು ಮೂಟೆ ಕಟ್ಟಿರಿ ಬನ್ನಿ ಹೋಗೋಣ! ಇವರಿಗೆ ಆ ಭಗವಂತ ತಕ್ಕ ಶಿಕ್ಷೆ ವಿಧಿಸುವನು” ಎಂದು ಮೃತ್ಯುಂಜಯ ಸ್ವಾಮಿ ಅವಸರ ಅವಸರ ಮಾಡ ತೊಡಗಿದ.
“ಸ್ವಾಮಿಗಳೆ ಇದು ನಿಮಗೆ ತರವಲ್ಲ. ನಿಮ್ಮ ಗುಣ ನಡತೆ ಆದರ್ಶ ಪಾವಿತ್ರ್ಯ ಆಚಾರ ವಿಚಾರವೆಂದರೆ ಇಷ್ಟೇನೇ? ಭಗವಾನ್ ಸಾಯಿಬಾಬಾರ ಅವತಾರ ಪುರುಷರೆಂದರೆ ಓಡಿ ಹೋಗುವುದಲ್ಲ! ನಿಮ್ಮ ಶಕ್ತಿ ಸಾಮಾರ್ಥ್ಯ ವ್ಯಕ್ತಪಡಿಸಿ ಎದುರಿಗಿದ್ದವರನ್ನು ಸೋಜಿಗ ಪಡಿಸುವ ಕೆಲಸವಾಗಬೇಕು ನೀವು ಒಪ್ಪಿ ಡೋಂಗಿ ಸ್ವಾಮಿ! ಉದರ ನಿಮಿತ್ತ ಮೈಗಳ್ಳನಾಗಿ, ಕಪಟ, ವಂಚನೆ, ಮೋಸ, ತಟವಟ ಮಾಡಿ ಜೀವನ ಸಾಗಿಸುತ್ತಿದ್ದೇನೆಂದೂ… ಹೇಳಿ” ಎಂದ ಮಠದ ಹಿರಿಯ ಸ್ವಾಮಿ.
“ನಿನ್ನದು ಅತಿಯಾಯಿತು! ಅಜ್ಞಾನಿಗಳ ಸಂಗಡ ನಮ್ಮ ವಾದ ವಿವಾದವಿಲ್ಲ! ನಾನು ಭಗವಂತನ ಪ್ರತಿರೂಪ ಅಪರಾವತಾರ ನನ್ನ ನಂಬಿರಿ, ನೀವು ನಂಬಲಿಲ್ಲವೆಂದರೆ… ನನಗೇನು ನಷ್ಟವಿಲ್ಲ ನಾನು ಹೊರಡುತ್ತೇನೆ…” ಎಂದು ಅಲ್ಲಿದ್ದ ಸ್ವಾಮಿಗಳನ್ನೆಲ್ಲ ತಳ್ಳಿ ಹೊರಗೆ ಹೋಗಲು ಅವಸರ ಮಾಡತೊಡಗಿದ.
ಇಷ್ಟರಿಂದಲೇ ಇವರಿಗೆಲ್ಲ ಅನ್ನಿಸಿತು! ಇವನು ಕಳ್ಳ ಸ್ವಾಮಿ! ಇವನು ಯಾರೋ ಕಪಟ ವೇಷಧಾರಿ ಡೋಂಗಿ ಸ್ವಾಮಿ ಎಂದು! ಇವನಿಗೊಂದು ಬುದ್ಧಿ ಕಲಿಸಬೇಕೆಂದು ಮಠದಿಂದ ಅವನನ್ನು ಹೊರಗೆ ಎಳೆದು ತಂದು ಅಲ್ಲಿದ್ದ ಬೇವಿನ ಮರಕ್ಕೆ ಕಟ್ಟಿ ಜನರೆದುರಿಗೆ ಚೆನ್ನಾಗಿ ಬಡಿಗೆಗಳಿಂದ, ಕಟ್ಟಿಗೆಗಳಿಂದ, ಬರಲು ಕೋಲುಗಳಿಂದ ಬಡಿದು… ಬಡಿದು… ತಣ್ಣೀರು ಬಿಸಿನೀರು ಕುಡಿಸಿ, ಕುಡಿಸಿ, ಪೊಲೀಸ್ಸರಿಗೆ ಒಪ್ಪಿಸಿದರು. ಪೊಲೀಸರು ಲಾಠಿ ರುಚಿ ನೋಡಿಸಿದರು.
ಮೃತ್ಯುಂಜಯ ಸ್ವಾಮಿಯೂ ವಾದವಿವಾದ, ಸಾಕ್ಷಿ, ಪುರಾವೆ ಹತ್ತಾರು ಶಿಷ್ಯರ ಕರೆಸಿ, ಪ್ರಕರಣವನ್ನು ಬೆಳೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ!
ನ್ಯಾಯಾಲಯ ಬಿಡದೆ ಪರಿಶೀಲಿಸಿ… ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಿತು.
*****


















