ಹಸಿರೆಲೆಗಳಂಜಲಿಯೊಳಾತು ರವಿ ತೇಜವಂ
ಜೀವಕರ್ಘ್ಯವನೆರೆವ ಬನದ ನಲವು,
ಕೆರೆಕೆರೆಯ ಹರಹಿನೊಳು ಜಲಹಾಸವನು ಮೆರಸಿ
ತಿರೆ ಬಣ್ಣಗೊಳಿಸುವೀ ಬಿಸಿಲ ನಲವು,
ಅಲೆ ಕೆದರೆ ತರು ಬೆದರೆ ನೀಲದಿಂ ಧುಮ್ಮಿಕ್ಕಿ
ಕೋಡಿಗೇರುತ ಗಾಳಿ ಮೊರೆವ ನಲವು,
ಬೆಳಕೆಲರು ಹಸಿರುಗಳ ಪೌತ್ರ ನಾನೀ ನಲವ
ನನ್ನ ಕರಣದಿ ಕೊಂಡು ನಲಿವ ನಲವು-
ಈ ನಲವು ಬೆರಗುಗಳ ಕೇಳುವಂತೆ ತೋರುತಿಹು-
ದೀಕೃತಿಯ ಚೆಲುವಿನೊಸಗೆ
ಆದಿಯಿಂದಿಂದಿಂಗೆ ನಡೆದ ದಣಿವನು ಕಳೆವ ಗುಡಿಯಿದಿರು
ಜನದ ಮಣಿಗೆ.
*****