ಆಗಸದ ಝಗಝಗಿಸುವ ನಕ್ಷತ್ರಗಳು
ಸಾಮೂಹಿಕ ರಜೆ ಹಾಕಿ ಹೋಗಿದ್ದವು.
ವಸುಂಧರೆಯ ಮೇಲೆ ಚಿಗರೆಯಂತೆ
ಪಟಪಟನೆ ಪುಟಿನಗೆಯುವ
ಒಂದೇ ಒಂದು ನಕ್ಷತ್ರ ಮಿನುಗುತ್ತಿತ್ತು.
ಪ್ರಖರವಾಗಿ ಹೊಳೆಯುತ್ತಿತ್ತು
ಮೂಗುತಿ ಸುಂದರಿ ಆ ಚೆಲುವೆಯ
ಆಟಕ್ಕೆ ಮನಸೋತು ತಲೆದೂಗಿ
ಹುಚ್ಚೆದ್ದು ಕುಣಿಯಿತು ಜನಸಮೂಹ
ತಟ್ಟಿದ ಚಪ್ಪಾಳೆಯ ಸದ್ದು
ಮಾರ್‍ದನಿಸುತ್ತಿತ್ತು ಚಾರ್‌ಮಿನಾರದಲ್ಲಿ
ಧರೆಯ ಮೇಲಿನ ನಕ್ಷತ್ರದ ಹೊಳಪು
ಸಹಿಸಲಗುತ್ತಿಲ್ಲ ಆಗಸದ ನಕ್ಷತ್ರಗಳಿಗೆ
ಹೊಟ್ಟೆ ಕಿಚ್ಚಿನಿಂದ ಬಾಗಿಲು ಮುಚ್ಚಿಕೊಂಡವು
ಧರ್‍ಮ-ಕರ್‍ಮಗಳ ಠೇಕೇದಾರರು ಮತ್ತೆ
ಹಾಕಿದ್ದ ಫತ್ವಾಗಳು-ಎಳೆದಿದ್ದ ಲಕ್ಷ್ಮಣರೇಖೆಗಳು
ತರಗೆಲೆಯಾಗಿ ಹಾರಿ ಹೋದವು ಗಾಳಿಯಲ್ಲಿ
ಮೀನಿನ ಹೆಜ್ಜೆಯಂತೆ ಅಳಿಸಿಯೇ ಹೋದವು
ಅಲೆಗಳ ಮೇಲೆ ತೇಲುತ್ತ ಗಾಳಿಯಲ್ಲಿ
ಸದ್ದಿಲ್ಲದೇ ಸುಮ್ಮನಾದವು ಧರ್‍ಮಕಾರಣಗಳು.
*****