ಏನೆಂದು ಹೇಳಲಿ ಅಕ್ಕ
ಮುತ್ತಿನ ಕತೆಯ
ಏನೆಂದು ಹೇಳಲಿ ಅದ
ಕಿತ್ತವನ ಕತೆಯ

ಬೃಂದಾವನ ತುಂಬ ಸುರಿಯಿತು ಮುತ್ತು
ಅದು ಸುರಿದರು ಇನ್ನೂ ಮುಗಿಯದೆ ಇತ್ತು

ಅತ್ತು ಕೇಳಿದ ಕೃಷ್ಣ
ಮತ್ತೂ ಕೇಳಿದ ಕೃಷ್ಣ
ಒತ್ತಾಯಿಸಿ ಕೇಳಿದ
ಸತ್ತಾಯಿಸಿ ಕೇಳಿದ
ಒಬ್ಬೊಬ್ಬ ಗೋಪಿಕೆಯ
ಹತ್ತು ಸಲ ಕೇಳಿದ
ಏನೆಂದು ಹೇಳಲಿ ಅಕ್ಕ
ಈ ಮುತ್ತಿನ ಕತೆಯ

ಒಬ್ಬೊಬ್ಬಳಿಂದಲು
ಒಂದೊಂದು ಮುತ್ತು
ದಿನವು ಬೇಡಿದನೆ
ಇನ್ನೊಂದು ಮುತ್ತು

ತುಟಿಗೊಂದು ಮುತ್ತು
ಕೆನ್ನೆಗೊಂದ್ಮುತ್ತು
ಹಣೆಗೊಂದು ಮುತ್ತು
ಹುಬ್ಬಿಗೆರಡಿತ್ತು

ನಗುತಿದ್ದರೊಂದು ಮುತ್ತು
ನಾಚುತಿದ್ದರು ಒಂದು ಮುತ್ತು
ಸುಮ್ಮನೆ ಹೋಗುತಿದ್ದರೆ ಮುತ್ತು
ಬಿಮ್ಮನೆ ಇದ್ದರೆ ಮುತ್ತೇ ಮುತ್ತು

ಮರೆಗಿದ್ದರೊಂದು ಮುತ್ತು
ಮಾತಾಡುತಿದ್ದರೆರಡು ಮುತ್ತು
ಹಾಡುತಿದ್ದರೆ ಹತ್ತು ಮುತ್ತು
ಮೌನವಾಗಿದ್ದರೆ ಮುನ್ನೂರು ಮುತ್ತು

ಹಾಲು ಕರೆಯುತ್ತಿದ್ದರೆ
ಕೇಳಿದಷ್ಟು ಮುತ್ತು
ನೀರು ತರುತಿದ್ದರೆ
ನೂರೊಂದು ಮುತ್ತು
ಐನೀರಿಗೈನೂರು ಮುತ್ತು
ರಂಗಿನಾಟಕೆ ಸಾವಿರ ಮುತ್ತು

ನಿನ್ನೆ ಬೇಕೆಂದನೆ
ಈ ದಿನ ಬೇಕೆಂದನೆ
ಈಗ ಬೇಕೆಂದನೆ
ಆಗ ಬೇಕೆಂದನೆ
ಯಾವತ್ತಿಗೂ ಅದು
ಸಾಕಾಗುವುದೆಂದನೆ
ಯಾವತ್ತಿಗೂ ಅದು
ಸಾಕಾಗದೆಂದನೆ

ಮುತ್ತು ಕೊಟ್ಟೇ ದಾರಿ
ಹೋಗಬೇಕೆಂದನೆ
ಶುದ್ಧ ಮುತ್ತೇ
ಆಗಬೇಕೆಂದನೆ
ಇದ್ದಷ್ಟೂ ಅವು
ಸಾಲದೆಂದನೆ
ಉದ್ದ ಮುತ್ತುಗಳೇ
ಒಳ್ಳೆಯದೆಂದನೆ
ಕದ್ದಾದರೂ ಅವ
ಕೊಡಬೇಕೆಂದನೆ

ಕೊಟ್ಟುದನೆಲ್ಲವ
ಚೆಲ್ಲಾಡಿ ಕೇಳಿದನೆ
ಕಳೆದುಹೋದುವು ಎಂದು
ಗೋಳಾಡಿ ಕೇಳಿದನೆ
ಆಡಿ ಕೇಳಿದನೆ ಕುಣಿ-
ದಾಡಿ ಕೇಳಿದನೆ
ಎಲ್ಲೆಂದರಲ್ಲಿ ಕಾಡಿ ಕೇಳಿದನೆ
ನಗಾಡಿ ಕೇಳಿದನೆ
*****