ಒಬ್ಬ ದೊಡ್ಡ ಕಲಾವಿದನ ಹತ್ತಿರ ಒಬ್ಬ ವ್ಯಾಪಾರಿ ಬಂದು ಒಂದು ಸುಂದರ ಚಿತ್ರ ಬರೆದು ಕೊಡಲು ಹೇಳಿದ. ಅವನು ಒಂದು ನಿಬಂಧನೆ ಹಾಕಿದ. “ಬರಿಯುವ ಚಿತ್ರದಲ್ಲಿ, ಹಕ್ಕಿ ಹಾಡಬೇಕು, ಹಾರ ಬೇಕು, ಗಿಡ ಚಿಗುರ ಬೇಕು, ಹೂವು ಅರಳಬೇಕು, ಹಣ್ಣು ಬಿಡಬೇಕು, ಕೋಗಿಲೆ ಹಾಡಬೇಕು, ಕೊಳದಲ್ಲಿ ಹಂಸ ತೇಲಬೇಕು. ಆಗಸದಲ್ಲಿ ಬೆಳ್ಳಿಯ ಮೋಡ ತೇಲಬೇಕು. ಇಂಥ ಚಿತ್ರ ಬರೆದು ತೋರಿಸಿದರೆ ನಾನು ನೂರು ಕೋಟಿ ರೂಪಾಯಿ ಕೊಡುವೆ” ಎಂದ.
ಚಿತ್ರಕಾರ ಹೇಳಿದ “ಇದು ನನ್ನಿಂದ ಸಾಧ್ಯವಿಲ್ಲದಿರಬಹುದು. ಆದರೆ ಓರ್ವ ಅತ್ಯಂತ ಮಹಾನ್ ಕಲಾವಿದ, ಅವನು ಕುಂಚವೂ ಇಲ್ಲದೆ ಕೌಶಲ್ಯದಿಂದ ಆಗಲೆ ಬಿಡಿಸಿದ ಚಿತ್ರ ನಾ ತೋರಿಸುವೆ. ಆದರೆ ಅವನ ನಿಬಂಧನೆ ನಿಮಗೆ ಏನು ಗೊತ್ತಾ?” ಎಂದ.
“ಆ ಚಿತ್ರದಲ್ಲಿ ಕಾಣುವ ಭೂಮಿ ಎಂದೂ ಹಸುರಾಗಿರಬೇಕು. ಆಕಾಶವನ್ನು ಕಲುಷಿತ ಗೊಳಿಸಬಾರದು. ಹಕ್ಕಿ ಕೊರಲ ನಿರ್ಲಕ್ಷಿಸ ಬಾರದು. ಹೂವು ಚಿಗುರು ಬಾಡದಿರಬೇಕು. ಹಾಗೇ ಇಡದಿದ್ದರೆ ನಿನ್ನ ಸರ್ವ ನಾಶಕ್ಕೆ ತಯಾರಿರಬೇಕು.” ಎಂದನು. ಮೊದಲು ಅಂತಹ ಚಿತ್ರ ಬರೆಯಲಿ ಆ ಕಲಾವಿದ. ಆಮೇಲೆ ನೋಡೋಣ ಎಂದ ವ್ಯಾಪಾರಿ. ಚಿತ್ರ ಈಗಲೆ ತಯಾರಿದೆ. ಕಲಾವಿದನನ್ನು ಈಗ ಕಾಣದಾದರು ಅವನ ಕಲಾಕೃತಿ ನೋಡಬಹುದು ಎಂದ ಕಲಾವಿದ.
“ಖಂಡಿತ ನೋಡಲು ಇಚ್ಛಿಸುತ್ತೇನೆ” ಎಂದ ವ್ಯಾಪಾರಿ. ಕಲಾವಿದ ಅವನ ಮನೆಯ ಹಿಂದಿನ ತೋಟಕ್ಕೆ ಕರೆದುಕೊಂಡು ಹೋದ. ಅದು ಅತಿ ಸುಂದರ ತೋಟ. ವ್ಯಾಪಾರಿ ಬಯಸಿದ ಗಿಡ ವೃಕ್ಷ, ಚಿಗುರು, ಹೂವು, ಕೊಳ ಹಂಸ, ಕೋಗಿಲೆ ಗಾನ, ಹಕ್ಕಿ ಚಿಲಿಪಿಲಿ ಎಲ್ಲಾ ಇದ್ದವು. ಇದು ಮಹಾನ್ ಕಲಾಕಾರನ ದೈವ ಸೃಷ್ಟಿ. ಇದಕ್ಕೆ ನೀನು ನೂರು ಕೋಟಿ ಬೆಲೆ ಕಟ್ಟುತ್ತೀಯಾ?” ಎಂದ.
“ಮೊದಲು ಪ್ರಕೃತಿ ಪೂಜಿಸು, ಕಾಪಾಡು, ಆಮೇಲೆ ನಿನ್ನ ವ್ಯಾಪಾರ,” ಅಂದಾಗ ವ್ಯಾಪಾರಿಯ ಕಣ್ಣು ತೆರೆಯಿತು.
*****