ಇವನು ವೈಯಾಕರಣಿ, ಷಟ್ಕಾಸ್ತ್ರಕೋವಿದನು,
ವೇದಪಾರಂಗತನು ವಿದ್ಯೆ ಗಳಿಸಲು ಬುದ್ದಿ –
ಯನು ಬೆಳೆಸಲೆಂದಿವನು ಪಟ್ಟ ಕಷ್ಟಸಮೃದ್ಧಿ –
ಯನು ಬಣ್ಣಿಸಲು ಬೇಕು ಎಂಟೆದೆಯ ಬಂಟತನ.
ಗ್ರಂಥಭಾರವ ಹೊತ್ತ ಶೀಷನಿವ. ಒಂಟಿಗನು
ಹಿರಿಯ ಪಾಂಡಿತ್ಯದಲಿ ಇವನು ಪಡೆದಿಹ ಸಿದ್ಧಿ-
ಯಹುದು, ನಿಸ್ಸಂದೇಹ, ಮಾನವ್ಯದಭಿವೃದ್ಧಿ.
ಇಹನು ಸುಜ್ಞಾನ-ಮಾರ್‍ಗದಲಿ ನಿಷ್ಕಂಟಕನು
ಬಡತನವು ತಾಂಡವಿಸೆ ಮನೆಯಲ್ಲಿ ಬರಿ ಹೊಯಲು,
ಹತ್ತು ಮಕ್ಕಳ ಕೊರಲು ಒಣಗುತಿದೆ ಅನ್ನ ನಮ-
ಗನ್ನ ವಿಲ್ಲೆಂದೊರಲಿ. ನಡೆಯೆ ಪಂಡಿತ ಗೋಷ್ಠಿ,-
ಬೆಂದೊಡಲೆ ಇವನ ಪಾಲೆಂದನಾ ಪರಮೇಷ್ಠಿ
ಮಸಣದುರಿಯಂತ ಧಗಧಗನೆ ಬಿಸಿಲೊಳಗಮಮ!
ಹಾಳು ಸುರಿಯುವದಿವನ ಬಾಳು ಬಯಲೋಬಯಲು.
*****