ಆ ಊರು ಈ ಊರು ಯಾವೂರು ತಿರುಗಿದರು
ಅಜ್ಜಪ್ಪ ಕುಲುಕುಲು ನಕ್ಕು ಬಂದಿ
ಉಕ್ಕಡಗಾತ್ರ್ಯಾಗ ಉಕ್ಕಲಾಡಿದಿ ಅಜ್ಜ
ಜ್ಞಾನ ಕಕ್ಕಡ ದೀಪ ಹಚ್ಚಿ ನಿಂದಿ
ಮರುಳನೆಂದರು ಮರುಳ ನೀ ಭಾರಿ ಶಿವಶರಣ
ಕೆಂಡ ಬೆಣ್ಣಿಯ ಉಂಡಿ ಮಾಡಿಬಿಟ್ಟಿ
ಮುಳ್ಳು ಮಲ್ಲಿಗಿ ಮಾಡಿ ಕಲ್ಲು ಕಪ್ಪುರ ಮಾಡಿ
ದೇಹ ದೀಪವ ಮಾಡಿ ಬೆಳಗಿ ಬಿಟ್ಟಿ
ಓ ಅಜ್ಜ ಅಜ್ಜಯ್ಯ ಜನುಮ ಸಾರ್‍ಥಕವಯ್ಯ
ಹಾಲು ಹಣ್ಣಿನ ಬೋನ ಉಣಿಸಿಬಿಟ್ಟಿ
ತಾಯಿಯೆಂದರು ಅಜ್ಜ ತಂದಿಯೆಂದರು ಅಜ್ಜ
ತಂಬುತ್ತಿ ಮಜ್ಜೀಗಿ ಕಟ್ಟಿಕೊಟ್ಟಿ
ಚಿಂತಿ ಸಂತಿಯ ಬಿಟ್ಟಿ ಸಂಸಾರ ಚಿತೆಬಿಟ್ಟಿ
ಕಣ್ಣೊಳಗ ಕಾವೇರಿ ಹರಿಸಿ ಬಿಟ್ಟಿ
ಜಡಿಯಾಗ ಶಿವಗಂಗಿ ಉಡಿಯಾಗ ಜಲತುಂಗಿ
ಮನಿಯ ಮಂತ್ರಾಲಯ ಮಾಡಿಬಿಟ್ಟಿ
*****