ನನಗೆ ನಿನ್ನ, ನಿನ್ನ ಕುಟುಂಬದವರ ಜೊತೆ, ಇನ್ನೂ ಅನೇಕರು, ಸ್ನೇಹ, ಪ್ರೀತಿ, ವಿಶ್ವಾಸಕ್ಕೊಂದು ಸಾವಿಲ್ಲವೆಂಬಂತೆ ನನಗೆ ಸ್ನೇಹ ಹಸ್ತ ಚಾಚಿದ್ದರು. ಚಿನ್ನೂ, ನಿನಗೆ ಕೊಂಡಜ್ಜಿಯ ಮೋಹನ್ ಗೊತ್ತಿದೆಯಲ್ಲಾ? ನೆನಪಿಸಿಕೋ… ನನ್ನ ಊರಿನ ಜಿಲ್ಲೆಯವರು, ಖ್ಯಾತ ರಾಜಕಾರಣಿಯವರ ಶ್ರೀಮಂತ ಕುಟುಂಬದವರು. ಅವರು ಬೆಂಗಳೂರಿನಲ್ಲಿದ್ದವರು. ದಿವಂಗತ ಶ್ರೀ ಪಿ. ಲಂಕೇಶ್ ಅವರ ಹುಟ್ಟಿದ ಹಬ್ಬಕ್ಕೆಂದು ಎಲ್ಲರೂ, ಅನೇಕರೂ ಅವರ ಕರೆಯ ಮೇರೆಗೆ ಶುಭ ಕೋರಲು ಹೋಗಿದ್ದೆವು. ನನಗೆ ಲಂಕೇಶ್ ಅಂದರೆ ರಾವಣನಂತೆಯೇ ಭಾಸವಾಗುತ್ತಿತ್ತು ತುಂಬಾ ಇಷ್ಟವಾಗುತ್ತಿದ್ದರೆ ಕಾರ್ಯದಲ್ಲೇ ಆಗಲಿ, ಸ್ನೇಹದಲ್ಲೇ ಆಗಲಿ, ಭದ್ರತೆಯ ಭಾವ ಕೊಡುವುದರಲ್ಲಾಗಲೀ, ಶಿವಭಕ್ತ ರಾವಣನಂತೆಯೇ, ಅವರು ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾಗ ನಾನೇ ಅವರಿಗೆ ಈ ಮಾತು ಹೇಳಿದ್ದೆ. ‘ಸಿಲ್ಲಿ…’ ಎಂದು ನಕ್ಕಿದ್ದರು. ಅಲ್ಲಿಯೇ ನನಗೆ ಮೊದಲ ಬಾರಿ ಮೋಹನ್ ಕೊಂಡಜ್ಜಿಯವರು ಪರಿಚಯವಾಗಿದ್ದರು. ನಂತರದಲ್ಲಿ ಸಹೋದರನ ಭಾವನೆಯ ನಂಟು ಬೆಳೆದಿತ್ತು.
ಅವರ ಜೊತೆಗೇ ಇರುತ್ತಿದ್ದ ನಮ್ಮ ಊರಿನ ಜಿಲ್ಲೆಯ ಬಿಳಸನೂರು ಗ್ರಾಮದ ಬಸವರಾಜ ರೆಡ್ಡಿಯ ಪರಿಚಯವಾಗಿ, ನಾನು ಬೆಂಗಳೂರಿನಲ್ಲಿರು ವವರೆಗೂ ಅವರೊಂದಿಗಿನ ಸ್ನೇಹ, ಪ್ರೀತಿ, ಸಹಾಯ ಮಾಡುತ್ತಿದ್ದ ರೀತಿ, ಮಧ್ಯರಾತ್ರಿ ಕರೆದರೂ ಸಹಾಯಕ್ಕೆ ಬರುತ್ತಿದ್ದ ಯಾವುದೇ ಹಬ್ಬ, ಹರಿದಿನವಿರಲಿ, ನಾನವರ ಮೋಹನ್ ಮನೆಗೆ ಶಾಶ್ವತ ಅತಿಥಿಯಾಗಿರುತ್ತಿದ್ದೆ. ಬೆಂಗಳೂರಿನಲ್ಲಿ ಅವರ ಮನೆ ಒಂದು ವಿಧದ ಛತ್ರದಂತೆ. ಯಾರೇ ಬಂದರೂ ಅಲ್ಲಿ ಹಸಿವು ನೀಗುತ್ತಿತ್ತು. ಪ್ರೀತಿಯ ಸ್ನೇಹದ, ಮಾತುಗಳಿಂದ ಒಳ್ಳೆಯ ಊಟ ತಿಂಡಿಯಿಂದ! ಹಾಗೆಯೇ ರೆಡ್ಡಿ ಹೊಟ್ಟೆಯಲ್ಲಿ ಹುಟ್ಟಿದ ಮಗನಿಗಿಂತಲೂ ಹೆಚ್ಚಾಗಿ ನನ್ನ ರಕ್ಷಣೆ ಮಾಡುವವನಂತೆ, ನಾನು ಸ್ನೇಹಿತರಿಗೂ ಹೇಳಲಾರದಂತಹ ತೊಂದರೆಗಳ ಸಮಯದಲ್ಲಿ ಹಾಜರಾಗುತ್ತಿದ್ದ ನನ್ನ ನೆರವಿಗಾಗಿ. ನಮ್ಮೂರಿನವರೇ ಆದುದರಿಂದ ನನ್ನವರೆಂದೇ ಭಾವಿಸಿದ್ದೆ.
ಹೀಗೆ ಹಲವಾರು ಒಳ್ಳೆಯ ಸ್ನೇಹಿತರು ಸಿಕ್ಕಿದ್ದರು ನನಗೆ. ಆ ಮಹಾನಗರ ಬೆಂಗಳೂರಿನಲ್ಲಿ ಆಕಸ್ಮಿಕಗಳು ನಡೆಯದಿದ್ದರೆ ಹೇಗೆ? ಕನಕಪುರಕ್ಕೆ ನನ್ನನ್ನು ಕೇಳಿಯೇ ಡಾ॥ ಸುದರ್ಶನ್ ಅವರು ವರ್ಗ ಮಾಡಿದ್ದರು. ಅವರಿಗೂ ನನ್ನ ಬಗ್ಗೆ ಆದರವಿತ್ತು. ಆಸ್ಪತ್ರೆಗೆ ಆಧುನಿಕ ಉಪಕರಣಗಳನ್ನು ಸರ್ಕಾರ ನೀಡಿತ್ತು. ಸ್ಕ್ಯಾನಿಂಗ್, ಡಯಾಲಿಸಿಸ್ ಮುಂತಾದವುಗಳ ಬಗ್ಗೆ ಪರಿಚಯವಿದ್ದ ಕೆಲವೇ ವೈದ್ಯರುಗಳನ್ನು ಹಲವು ತಾಲ್ಲೂಕ್‌ಗಳಿಗೆ ಅಂದು ವರ್ಗ ಮಾಡಿದ್ದರು. ಅದರಲ್ಲಿ ನಾನೂ ಒಬ್ಬಳಾಗಿದ್ದೆ. ಒಪ್ಪಿಗೆಯ ಮೇರೆಗೆ ನಾನಲ್ಲಿಗೆ ಹೋಗಲೇಬೇಕಾಗಿತ್ತು. ಬೆಂಗಳೂರಿನ ಸಮೀಪವೇ ಇದ್ದುದರಿಂದ ದಿನವೂ ಪ್ರಯಾಣ ಮಾಡಿ ಬರಬೇಕಿತ್ತು. ಮಹಿಳಾ ರೋಗಿಗಳು ಜಾಸ್ತಿಯಾದುದರಿಂದಲೂ ರಾತ್ರಿಯ ವೇಳೆಯಲ್ಲಿಯೂ ತುರ್ತು ಚಿಕಿತ್ಸೆಗಾಗಿ ಬರುತ್ತಿದ್ದರಿಂದ ನಾನು ಪೂರ್ಣ ಅವಧಿಯಲ್ಲಿ ಅಲ್ಲಿಯೇ ಉಳಿಯಬೇಕಾಗುತ್ತಿತ್ತು. ಆಸ್ಪತ್ರೆಯ ಆವರಣದಲ್ಲಿಯೇ ನನಗೊಂದು ವಸತಿ ಗೃಹವನ್ನು ನೀಡಿದ್ದರು. ಇದರಿಂದ ನನ್ನ ಗಂಡನಿಗೆ ಅನಾನುಕೂಲವಾಗುತ್ತದೆಂದು ಭಾವಿಸಿದ್ದೆ. ಊಹೂಂ… ಎಂದಿಗಿಂತಲೂ ಉತ್ಸಾಹದಿಂದ ಇರುತ್ತಿದ್ದುದನ್ನು ಕಂಡು ಮೊದಲು ನನಗೆ ಆಶ್ಚರ್ಯವಾಗಿತ್ತು. ಬಿಡುಗಡೆಯ ಭಾವದಿಂದ ಹಗುರಾಗಿದ್ದಂತೆ ಕಂಡಿತ್ತು… ಆದರೂ ನಾನು ಕೇಳಲು ಹೋಗಿರಲಿಲ್ಲ. ಮನೆಯ ಬಳಿಯಲ್ಲಿಯೇ ಇದ್ದ ಹೋಟೆಲ್ ಅವನ ಅಡಿಗೆ ಮನೆಯಾಗಿತ್ತು. ನಾನು ಸಮಾಧಾನಪಟ್ಟುಕೊಂಡಿದ್ದೆ.
ಆದರೆ, ಕೆಲವು ದಿನಗಳಲ್ಲಿಯೇ ನನ್ನ ಯೋಚನೆ ಸಮಾಧಾನವನ್ನು ಬುಡಮೇಲು ಮಾಡುವಂತಹ ಸುದ್ದಿಯೊಂದು ತಿಳಿದುಬಂದಿತ್ತು. ಬೆಂಗಳೂರಿನಲ್ಲಿಯೇ ಇದ್ದ ಅಣ್ಣನ ಮನೆಗೂ ಹೋಗಿ ಸಮಯ ಕಳೆಯುತ್ತಿರಬಹುದೆಂದುಕೊಂಡಿದ್ದೆ. ಆದರೆ ಬೌರಿಂಗ್ ಆಸ್ಪತ್ರೆಯಲ್ಲಿ ನನ್ನ ಜೊತೆಯೇ ಕೆಲಸ ಮಾಡುತ್ತಿದ್ದ ನರ್ಸ್ ಒಬ್ಬಳ ಜೊತೆ ಓಡಾಡತೊಡಗಿದ್ದ. ನನಗೆ ಆಘಾತವಾಗಿರಲಿಲ್ಲ. ಅಸಹ್ಯವಾಗಿತ್ತು. ರಕ್ತದ ಗುಣ ಎಲ್ಲಿ ಹೋಗುತ್ತೆ ಹೇಳು? ಒಬ್ಬರ ಜೀವನದ ಗಂಟು, ನಂಟು ಹರಿದು ಹೋಗುತ್ತದೆಯೆಂದರೆ ಕೂಡಿಸುವವರಿಗಿಂತ ಇನ್ನೂ ಕೆಡಿಸುವವರೇ ಹೆಚ್ಚು. ಅದು ನನಗೆ ಅನ್ವಯಿಸುವುದಿಲ್ಲ ಬಿಡು. ಯಾವಾಗಲೋ ಭದ್ರತೆಯ ಗಂಟು ಸಡಿಲವಾಗಿತ್ತು. ಬೌರಿಂಗ್ ಆಸ್ಪತ್ರೆಯಿಂದ ಅವರ ಓಡಾಟ, ಅಲೆದಾಟದ ಬಗ್ಗೆ ಬಣ್ಣ ಕಟ್ಟಿ ಹೇಳುವವರೇ ಹೆಚ್ಚಾಗಿದ್ದರು. ನನ್ನ ಕಾರಿನಲ್ಲಿಯೇ ಆಕೆಯ ಮನೆಯಿಂದ ಬೆಳಿಗ್ಗೆ ಆಸ್ಪತ್ರೆಗೆ ಕರೆದು ತಂದು ಬಿಡುವುದು ಅವಳ ಡ್ಯೂಟಿಯು ಮುಗಿದ ನಂತರ ಕರೆದೊಯ್ಯಲು ಹೋಗುತ್ತಿದ್ದನಂತೆ.
ನಾನು ಕನಕಪುರಕ್ಕೆ ಬಂದ ಮೇಲೆ ಚಿನ್ನು ಯಾವಾಗಲೂ ನನ್ನ ಬಳಿಯೇ ಇರುತ್ತಿದ್ದ ನಿನ್ನನ್ನು ನಿನ್ನ ಮನೆಗೆ ಕರೆದುಕೊಂಡು ಹೋಗಿಬಿಟ್ಟಿದ್ದೆ. ನನ್ನ ದುರಾದೃಷ್ಟದ ನೆರಳು ಎಂದೆಂದಿಗೂ ನಿನ್ನ ಮೇಲೆ ಬೀಳಬಾರದು. ನೀನು ನಿನ್ನ ಜಾತಿ, ಧರ್ಮದ ರೀತಿ-ರಿವಾಜುಗಳನ್ನು ತಿಳಿದುಕೊಳ್ಳಬೇಕು. ನಿನ್ನ ದೊಡ್ಡ ಕುಟುಂಬದಲ್ಲಿ ನೀನೂ ಒಬ್ಬಳಾಗಬೇಕು, ಬಾಂಧವ್ಯದ ಬಿಳಲುಗಳು ನಿನ್ನ ಸುತ್ತುವರೆದು ಸುಭದ್ರವಾಗಿ, ಸುರಕ್ಷಿತವಾಗಿ, ಸಂತೋಷದಿಂದ ಬೆಳೆಯಬೇಕು. ಎಂದೂ ಒಂಟಿತನ ಅನುಭವಿಸುವುದು ನನಗೆ ಬೇಡವಾಗಿತ್ತು. ಹೀಗಾಗಿ ನಿನ್ನ ಮನೆಗೆ ನಿನ್ನನ್ನು ಬಿಟ್ಟು ಬಂದಿದ್ದೆ. ಆದರೆ ನಾನು ತೀರಾ ಒಂಟಿತನ ಅನುಭವಿಸತೊಡಗಿದ್ದೆ ಚಿನ್ನೂ.
ಹಂಪಿ ವಿಶ್ವ ವಿದ್ಯಾಲಯದಲ್ಲಿ, ಡಿ.ಲಿಟ್, ಪಿ.ಎಚ್.ಡಿ. ಪದವಿಗಾಗಿ ಓದುತ್ತಿದ್ದವರನ್ನು ನೋಡಿದ್ದೆ. ಹಂಪಿ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯೆಯಾಗಿ ಆಯ್ಕೆಯಾಗಿದ್ದು ತಿಳಿದಿತ್ತು. ನಾನು ಆ ಸಭೆಗಳಿಗೆ ಹೋಗಲಾಗುತ್ತಿರಲಿಲ್ಲ. ಆಸ್ಪತ್ರೆಯಲ್ಲಿನ ಕೆಲಸಗಳ ಒತ್ತಡ. ಮತ್ತು ರಜೆ ಸಿಗದೇ ಇದ್ದುದರಿಂದ, ಸದಸ್ಯತ್ವದಿಂದ ಹೊರಗೆ ಬಂದುಬಿಟ್ಟಿದ್ದೆ. ಕನಕಪುರದಲ್ಲಿರುವಾಗಲೇ ಶ್ರೀ ಚಂದ್ರಶೇಖರ ಕಂಬಾರರನ್ನು ಭೇಟಿಯಾಗಿದ್ದೆ ಈ ವಿಷಯವಾಗಿ ಅದಕ್ಕೆ ಅವರು ಒಳ್ಳೆಯ ಸಲಹೆ ನೀಡಿದ್ದರು.
“ಪಿ.ಹೆಚ್.ಡಿ ಗೆ ಪದವಿಗಾಗಿ ಮೂರು ವರ್ಷಗಳಾಗುತ್ತದೆ. ಡಿ.ಲಿಟ್. ಪದವಿಗಾಗಿ ಓದಿ ಬೇಕಾದ್ರೆ, ಹೇಗೂ ನೀವು ವೈದ್ಯರು. ಮಕ್ಕಳ ಮನೋವಿಜ್ಞಾನದ ಬಗ್ಗೆ ಓದಿ, ಅಧ್ಯಯನ ಮಾಡಿ”.
ನನಗೆ ಬಿಡುವಿನ ವೇಳೆ ಓದಲೇ ಬೇಕಾಗುತ್ತಿತ್ತು. ಈ ಪದವಿಗಾಗಿ ಓದಿದರೆ ಚೆನ್ನಾಗಿ ಭಯದಿಂದ ಸವಿವರವಾಗಿ ಓದಬಹುದು. ಅಲ್ಲದೇ ಪದವಿಯೂ ಸಿಗುತ್ತದೆ ಎಂಬುದು ನನ್ನ ಅನಿಸಿಕೆಯಾಗಿತ್ತು. ಹೇಗೂ ನೀನು ನನ್ನ ಹತ್ತಿರವಿದ್ದಾಗ ಮನೋವಿಜ್ಞಾನದ ಪುಸ್ತಕವನ್ನೋದಿ ನಿನ್ನನ್ನು ಅದರಂತೆ ಬೆಳೆಸತೊಡಗಿದ್ದೆನಲ್ಲಾ…? ಅದೀಗ ಉಪಯೋಗಕ್ಕೆ ಬಂದಿತ್ತು ನೋಡು. ನೀನೇ ಆ ಪ್ರಬಂಧಕ್ಕೆ ನಾಯಕಿಯಾಗಿದ್ದೆ. ಪ್ರಬಂಧ ಬರೆದೆ. ಡಿಗ್ರಿಯೂ ಸಿಕ್ಕಿತ್ತು. ಇದನ್ನು ನಿನಗೆ ಮೊದಲೇ ಹೇಳಬೇಕಾಗಿತ್ತು. ನೀನು ‘Gifted Child’ ಆಗಿ ಬೆಳೆದಿದ್ದೆ. ನನಗೆ ತುಂಬಾ ಸಂತೋಷವಾಗಿತ್ತು ಚಿನ್ನು. ನಾನು ಡಿ.ಲಿಟ್‌ಗಾಗಿ ಓದಿದ್ದು, ಸಾರ್ಥಕವೆನ್ನಿಸಿತ್ತು.
ಒಂದು ದಿನ ಆಕಸ್ಮಿಕವೆಂಬಂತೆ ಫೋನು ಬಂದಿತ್ತು. ಬೌರಿಂಗ್ ಆಸ್ಪತ್ರೆಯಿಂದ ಫೋನು ಬಂದಿತ್ತು.
“ಹಲೋ…” ಎಂದಿದ್ದೆ.
“ಮೇಡಂ… ನಾನು…”
“ಯಾರೂಂತ ಗೊತ್ತಾಗಲಿಲ್ಲ…”
ಆಕೆ; ಹೆಸರು ಹೇಳಿದ್ದಳು. ಒಂದು ನಿಮಿಷ ಸ್ತಬ್ಧವಾಗಿದ್ದೆ.
“ಅವರು ಅಲ್ಲಿಗೆ ಬಂದಿದ್ದಾರಾ?” ಆಕೆ ಕೇಳಿದ್ದಳು.
“ಯಾರು?” ಸಾವರಿಸಿಕೊಂಡು ಕೇಳಿದ್ದೆ.
“ನಿಮ್ಮ ಯಜಮಾನರು…”
“ಇಲ್ಲ…”
“ಸರಿ…” ಆಕೆ ಫೋನನ್ನಿಟ್ಟಿದ್ದಳು.
ನಾನು ಸುಮಾರು ಹೊತ್ತು ರಿಸೆಪ್ಷನ್ ಕೌಂಟರ್‌ಬಳಿಯಿದ್ದ ಕುರ್ಚಿಯ ಮೇಲೆ ಕುಳಿತೇ ಇದ್ದೆ. ಅಸೂಯೆ ಒಂದು ಕ್ಷಣ ಮೂಡಿತ್ತು. ಇಷ್ಟು ವರ್ಷಗಳ ಸಂಗಾತಿ ದೂರವಾದುದಕ್ಕಿರಬೇಕು. ನನಗೇನೂ ಆಗುವುದಿಲ್ಲವೆಂದುಕೊಂಡಿದ್ದೆ. ನಾನೂ ಪ್ರೀತಿಸಿದ್ದೆನಾ? ಊಹೂಂ… ಯಾವುದೇ ವಸ್ತುಗಳು ಬಹಳ ದಿನಗಳವರೆಗೂ ನಮ್ಮ ಬಳಿಯಿದ್ದಾಗ ಅದರ ಬಗ್ಗೆ ಒಂದು ವಿಧದ Sentiments ಇರುತ್ತದೆ ಅಲ್ವಾ? ನಾನು Emotional ಆಗಲಿಲ್ಲ. ಆದರೂ ಇನ್ನು ಮುಂದೆ ಅವನು ನಿಜಕ್ಕೂ ದೂರ ಹೋಗಿಬಿಡುತ್ತಾನೆ. ಎಲ್ಲದರಿಂದಲೂ ಎಂದು ಅನ್ನಿಸಿತ್ತು. ಅವನಾಗಿಯೇ ಬಿಡುಗಡೆಗೊಳ್ಳುತ್ತಿದ್ದಾನೆಂಬ ನಿಟ್ಟುಸಿರು ಬಂದಂತಾಗಿದ್ದರೂ ಒಂದು ಕ್ಷಣ ವಿಚಲಿತಳಾಗಿದ್ದೆ. ಇಷ್ಟು ದಿನಗಳೂ ವದಂತಿ, ವರದಿಗಳೂ ಬಂದಿದ್ದರೂ ಆದಿನ ಸತ್ಯವೆಂದು ಗೊತ್ತಾಗಿತ್ತು. ನನ್ನ ಅಷ್ಟು ವರ್ಷಗಳ “ಸಹಿಸುವಿಕೆಗೆ” ಅಂತ್ಯಕಾಲ ಬಂದಿತ್ತು. ಪಕ್ಕದ ಮನೆಯವರತ್ತ ಬಾಗಿದ್ದ, ಅವರಿಗೆ ಹಣ್ಣುಗಳನ್ನು ಕೊಡುವ ಮರಕ್ಕೆ ನೀರೆರೆಯುವುದು ಹುಚ್ಚುತನವೆಂದುಕೊಂಡಿದ್ದೆ.
ಭಾನುವಾರ ಬೆಂಗಳೂರಿಗೆ ಬಂದಿದ್ದೆ. ಅವನ ಬಳಿ ಮಾತನಾಡಬೇಕಿತ್ತು.
“ಆಕೆ ಫೋನು ಮಾಡಿದ್ದಳು. ಯಾರು ಆಕೆ?” ಕೇಳಿದ್ದೆ.
“ನಂಗೇನು ಗೊತ್ತು?”
“ನಿನ್ನನ್ನೇ ವಿಚಾರಿಸಿದ್ದಳು”.
“…..”
“ನಂಗೇನೂ ಬೇಸರವಿಲ್ಲ. ನನಗಾಗಿ ನೀನೂ ತುಂಬಾ ಕಳೆದು ಕೊಂಡಿದ್ದೀಯಾ… ನಿನಗಿನ್ನು ಹೊಸಬದುಕು ಆರಂಭಿಸಲು ಸಮಯವಿದೆ. ನನ್ನಿಂದ ನಿನಗೆ ಯಾವ ಸುಖವೂ ಸಿಗಲಿಲ್ಲಾಂತ ಗೊತ್ತು…”
“…..”
“ಆದರೂ ನೀನು ನನಗೆ ತುಂಬಾ ಸಹಾಯ ಮಾಡಿದೆ. ರಕ್ಷಣೆ ಕೊಟ್ಟಿದ್ದೆ. ಹಾಗೇ… ಸಾಮಾಜಿಕ ಭದ್ರತೆಯನ್ನು ಕೊಟ್ಟಿದ್ದೆ. ಈಗ ನನಗೆ ಭದ್ರತೆಯ ಭಯವಿಲ್ಲ. ಒಂಟಿಯಾಗಿ ಎಲ್ಲಿಗೆ ಹೋದರೂ ಬದುಕಬಲ್ಲೆ…”
“ಅದಕ್ಕೇ…?”
“ನಿನ್ನ ಇಷ್ಟಕ್ಕೆ ಅಡ್ಡಿಪಡಿಸೋಲ್ಲ…”
“ಅಡಿಗೆಯ ನಂತರ ಹೊರಗೆತ್ತಿ ಬಿಸಾಡುವ ಕರಿಬೇವಿನ ಎಲೆಗಳ ಹಾಗಿದೆ ನಿಮ್ಮ ಮಾತು…”
“ನಿನಗೂ ಇಷ್ಟವಿದ್ದೇ ನಾನು ನಿನ್ನನ್ನು ಮದುವೆಯಾಗಿದ್ದು…”
“ಅಯ್ಯೋ… ಪದೇ ಪದೇ ಅದೇ ವಿಷಯಕ್ಕೆ ಯಾಕೆ ಬರ್ತೀರಾ? ಅದು ಮುಗಿದು ಹೋದ ಕತೆ. ನನಗದರ ಬಗ್ಗೆ ನಂಬಿಕೆಯಿಲ್ಲ”.
“ಅಂದ್ರೆ…?”
“ನನಗೆ ಯಾವ ಭದ್ರತೆಯ ಭಯವಿದ್ದಿರಲಿಲ್ಲ. ನಿಮಗಾಗಿ ಒಪ್ಪಿದ್ದೆ… ನಾನು ಸುಖವಾಗಿಯೇ ಇದ್ದೆ. ನಿಮ್ಮ ನಿರ್ಲಕ್ಷ್ಯ ಮತ್ತು ಅನಾದರವನ್ನು ಕಂಡು ಗಾಬರಿಯಾಗಿತ್ತು. ಇದ್ದಷ್ಟು ದಿನವಿದ್ದರಾಯ್ತು ಎಂದುಕೊಂಡೆ. ಈ ಮದುವೆ, ಶಾಸ್ತ್ರಗಳ ಬಗ್ಗೆ ನನಗೆ ಗೌರವ, ನಂಬಿಕೆಯಿಲ್ಲ. ಬದುಕಿನುದ್ದಕ್ಕೂ ಒಬ್ಬರ ಜೊತೆಯೆ ಇರುವುದೆಂದರೆ ಉಸಿರುಗಟ್ಟಿಸುವ ವಿಷಯವೇ…”
“ನೀನು ಬಹಳ ದೊಡ್ಡವನಂತೆ ಹೇಳ್ತಾಯಿದ್ದೀಯಾ…”
“ಹೌದು… ನಾನು ನಿಮಗಿಂತ ಚಿಕ್ಕವನು. ಆದರೆ ನಂಗೂ ವಯಸ್ಸಾಗುತ್ತಾ ಬಂದಿದೆಯಲ್ವಾ?”
“…..”
“ನೀವು ನನ್ನನ್ನು ಸುಖವಾಗಿ, ಆರಾಮವಾಗಿಟ್ಟುಕೊಂಡಿದ್ದೀರಿ. ನನ್ನ ಬೇಜಾವಾಬ್ದಾರಿತನ… ಕೆಟ್ಟ ಚಟಗಳನ್ನು ಸಹಿಸಿಕೊಂಡಿರಿ…”
“ಅದಕ್ಕೇ ನಾನು ನಿಮ್ಮ ಹಾಗೆ ನಿರ್ಲಕ್ಷ್ಯ ಮಾಡಲಿಲ್ಲ…”
ಅವನೊಂದಿಗೆ ಮಾತನಾಡಲು ಬಂದವಳು ಅವನ ಮಾತುಗಳನ್ನು ಕೇಳುತ್ತಾ ಕುಳಿತುಕೊಂಡಿದ್ದೆ!
ಮುಂದೇನು ಮಾತನಾಡಿರಲಿಲ್ಲ. ಎಲ್ಲಾ ತಿಳಿದಿತ್ತು ಅವನಿಗೆ. ಆದರೂ ನನಗೆ ಅವನ ಬಗ್ಗೆ ಕರುಣೆಯಿತ್ತೋ ಏನೋ…? ಅವನ ಎಲ್ಲಾ ಅಪರಾಧಗಳನ್ನು ಕ್ಷಮಿಸುತ್ತಾ ಬಂದಿದ್ದೆನಾ ನಾನು? ಗೊತ್ತಿಲ್ಲ ಚಿನ್ನು.
*****
ಮುಂದುವರೆಯುವುದು