ಒಬ್ಬನೆಂದರೊಬ್ಬನೇ
ಒಬ್ಬನೊಳಗೆ ಇಬ್ಬನೇ
ಇಬ್ಬನೇ ಮೂವನೇ
ಒಬ್ಬನೊಳಗೆ ಎಷ್ಟನೇ

ಒಂದು ಒಡಲ ನೋಡಿ ನಾವು
ಒಬ್ಬನೆನುವೆವು
ಒಂದು ಒಡಲಿಗೊಬ್ಬನೇ
ಎಂದುಕೊಳುವೆವು

ಒಬ್ಬನಲ್ಲ ಇಬ್ಬನಲ್ಲ
ಒಳಗಿರುವವನಿಗೆ ಲೆಕ್ಕವಿಲ್ಲ
ಬಂದು ಹೋಗಿ ಮಾಡುತಾರೆ
ಒಕ್ಕಲಿಗರೆ ಎಲ್ಲರೂ

ಒಬ್ಬನೆಂದು ಯಾರು ಇಲ್ಲ
ಒಬ್ಬರನೊಬ್ಬ ಒತ್ತುತ್ತಾರೆ
ತಳ್ಳಿ ಜಾಗ ಮಾಡುತಾರೆ
ಆಚೆ ಈಚೆ ನಿಲ್ಲುತಾರೆ

ನೆರಳಿನಲ್ಲಿ ಅಡಗುತಾರೆ
ಸಮಯ ಕಾಯುತಿರುತಾರೆ
ಅಂದುಕೊಳ್ಳದಿರುವಾಗ
ಮುಂದೆ ಕಾಣಿಸಿಕೊಳ್ಳುತಾರೆ

ಮುಂಜಾನೆ ಕಂಡವನೇ
ಸಂಜೆ ಹಾಗೇ ಇರುತಾನೆಯೆ
ಹಗಲು ನಗುತ ಇದ್ದವನೆ
ಇರುಳು ಅಳುತ ಇದ್ದಾನೆಯೆ

ಒಬ್ಬರನೊಬ್ಬರು ಕೆಣಕುತಾರೆ
ಪರಸ್ಪರ ದೂರುತ್ತಾರೆ
ನೀನು ತಾನು ಎನುತಾರೆ
ತಪ್ಪು ಯಾರೂ ಒಪ್ಪಿಕೊಳರು
ತಾವೇ ಸರಿ ಎನುವರು

ಕ್ಷಣಕ್ಷಣವು ಬದಲಾವಣೆ
ಇದ್ದಂತೆಯೆ ಇರುವುದಿಲ್ಲ
ಪಾಪಿಯಿಂದು ಸಂತ ನಾಳೆ
ನಿನ್ನೆಯ ಆರೋಪಿಯೇ
ಈವತ್ತು ನ್ಯಾಯಾಧೀಶನು

ಯಾರ ನೀನು ಹಳಿಯುವಿ
ಯಾರ ಹಾಡಿ ಹೊಗಳುವಿ
ಒಂದೆ ಒಡಲ ಮನದ ಪರಿಯ
ಹೇಗ ಅರಿಯುವಿ

ಮನವೆಂಬುದು ಅತಿ ವಿಚಿತ್ರ
ಬರೆದರಿಲ್ಲ ಅದರ ಚಿತ್ರ
ಭಾಷೆ ಕೂಡ ಸೋಲುವುದು
ಅದರ ರೀತಿ ಹಿಡಿಯಲು

ಒಬ್ಬನಲ್ಲ ನೀನು ನಾನು
ನನ್ನೊಳಗೆ ನಿನ್ನ ಭಾವ
ನಿನ್ನೊಳಗೆ ನನ್ನ ಭಾವ
ಅದಲುಬದಲು ಆಗುವೆವು

ನಿನ್ನ ಮನದ ಗಾಯವೆ
ನನ್ನೊಳಗೂ ವೇದನೆ
ನಿನ್ನ ಸಂತೋಷವೆ
ಕಿಂಚಿದೂನು ನನ್ನದೆನೆ

ನೀನು ಯಾರು ನಾನು ಯಾರು
ಒಬ್ಬನಲ್ಲ ಸಹಸ್ರ
*****