ಬುವಿಯ ಚಾಪೆಯ ತೆರದಿ ಸುತ್ತಿ ಹೊತ್ತೊಯ್ವಂತೆ
ಕತ್ತಲೆಹಿರಣ್ಯಾಕ್ಷ ಮುತ್ತಿಬಹ ನಕ್ಷತ್ರ-
ಮೊತ್ತಮಂ ಧಿಕ್ಕರಿಸಿ ಬರುತಿಹನು ಗೆಲವಾಗಿ
ದಿವಕಶಾಂತಿಯ ತಂದು. ಹೊಸರಾಜ್ಯವಾಯ್ತಿಂದು
ಇದರ ಸತ್ಯವೆ ಬೇರೆ, ಶಾಸನವೆ ಬೇರೆ. ರವಿ
ತೋರಿದಾ ಜಗದ ಮಾಯೆ ತೀರಿತು. ಹೊಸ ಮಾಯೆ
ತೋರಿತೈ-ಆ ಮಾಯೆಯನೆ ಮಗುಚಿ ಈ ದೈತ್ಯ
ಹೊದೆದನೋ ತನ್ನ ದೊರೆತನವ ಮೆರಸಲೋಸುಗ!
ಹಗಲೊಳೆಡೆಗೆಟ್ಟಾಸೆ ಭಯಕೆಲ್ಲ ಎಡೆಯಿಲ್ಲಿ,
ಅಲ್ಲಿ ಗೆಲವಾದುದಿಲ್ಲಿ ಜಡ. ಅಲ್ಲಿನ ನನಸು
ಇಲ್ಲಿನ ಸ್ವಪ್ನ; ನಿರಂತವೀ ದೇವಾಸುರಂ,
ಜಗದಾಟ ಈ ಮಾಯೆ ಮಗುಚಿ ಹೊದೆವಾಟ-ಎನೆ
ಎಂತು ಮೈದೋರಿದಂ ಉಭಯರಿಗು ಶುಭವ ಕೋರಿ.
ಶಂಕರ ಸುಧಾಕರಂ ಮತ್ತೊಂದು ಮಾಯೆ ತೋರಿ.
*****