ಸಂತೆ ಗದ್ದಲದಲಿ ಕೂತು
ಸಂತರಾಗುವ ಹುಚ್ಚು!
ನೂರಾರು ಆಮಿಷಗಳ
ಚುಂಬಕ ಸೆಳೆತದಲೂ
ಏನೂ ಬೇಡೆನುತ
ಕಣ್ಮುಚ್ಚಿ ಕುಳಿತರೂ
ಮತ್ತದೇ ಸೆಳೆವ
ಬಣ್ಣದ ಚಿತ್ರಗಳು.
ಗಳಿಗೆಗೊಮ್ಮೆ
ಅಲ್ಲಿಲ್ಲಿ ಹಾರುವ
ಹುಚ್ಚು ಮನಸಿಗೆ
ಕಲಿಸುವುದೆಂತು
ಸ್ಥಿತಪ್ರಜ್ಞತೆಯ ಪಾಠ?
ನಿರ್ಲಿಪ್ತತೆಯ ಮುಗಿಯದಧ್ಯಾಯ?
ಸಂತರಾಗಬೇಕೆಂದರೆ
ಸಂತೆಯದೆಲ್ಲಾ ಆಮಿಷ ಕೊಡವಿ
ಬಯಲಿಗೆ ಮುಖ ಮಾಡಬೇಕೇ?
ಸಂತರಾಗುವ
ಬಯಕೆಯೇ ಬರಿಯ ಬಯಲೇ?
ಸೂಜಿಗಲ್ಲಿನ ಸೆಳೆತಕ್ಕೆ
ಹೆದರಿ ಓಡುವವ ಹೇಡಿ
ಇದರಲ್ಲೇ ಇದ್ದು
ಇದನ್ನೇ ಗೆದ್ದು
ನಿಲ್ಲುವವನೇ ಧೀರ
ಎಂದೋ ಯಾರೋ ಹೇಳಿದ
ತತ್ವ ತಲೆಹೊಕ್ಕು
ಮತ್ತದೇ ಸಂತೆಯೊಳಗೆ ಬಿದ್ದು
ಇನ್ನಾವುದೂ ಬೇಡ
ಎಂದೆನ್ನುತ್ತೆನ್ನುತ್ತಲೇ
ಏಳುವಾಗಲೆಲ್ಲಾ ಮತ್ತೆಮತ್ತೆ
ಅದರಲ್ಲೇ ಜಾರಿ.
ಇತಿಹಾಸಕ್ಕೆ ಮಾನ್ಯರಾಗದೇ
ಸಂತೆಯೊಳಗೂ ಲೆಕ್ಕಕ್ಕೆ ಸಿಗದೇ
ಇತ್ತ ಸಂತರೂ ಆಗದೇ
ಅತ್ತ ಸಂತೆಗೂ ನಿಷ್ಠರಾಗದೇ
ಉಳಿದು ಬಿಡುವ
ಇವರು ಸಂತೆನುಂಗಿದ
ಸಂತರಾಗದವರು
*****


















