ಮುದವಾರಲು, ಅಳಲೇರಲು,
ಭಯ ಮಸಗಲು- ತುಡಿದು,
ಮನ ದೇವಗೆ ಮೊರೆಯಿಡುವುದು
ನರನೊಲುಮೆಯ ಜರೆದು.

ಹರುಷವಿದ್ದರೆ ದೇವನೇತಕೆ?
ಹರಕೆಯಾತ್ರೆಗಳೇಕೆ?
ಮನುಜಗಾಸೆಗಳಿಂಗಿಹೋದರೆ
ಹರಿಯ ಹಂಗವಗೇಕೆ?

ಸ್ವಾರ್‍ಥತ್ಯಾಗದ ನಲವನರಿಯಲು
ಮೋಕ್ಷದೊಳು ನೆಚ್ಚೇಕೆ?
ಮರ್‍ತ್ಯನೊಲುಮೆಗೆ ಕಂಗಳಿದ್ದರೆ
ದೇವನೊಲುಮೆಯದೇಕೆ?

ಆಸೆ ಸಲ್ಲಿಸಲು ಪಾಪಕೆಳಸಲು
ದಹಿಸಲು ಪರಿತಾಪ,
ಬುವಿಯೊಳೆಲ್ಲಿಯು ದೊರೆಯದೆಯೆ ಇರೆ
ಕ್ಷಮೆ, ದಯೆ, ಅನುತಾಪ,
ಸ್ವಾರ್‍ಥಸ್ವಾರ್‍ಥದ ತುಮುಲಯುದ್ಧದಿ
ಬಯಲಾಗಲು ಬಯಕೆ,
ಅಂದು ದೇವಗೆ ಮೊರೆಯನಿಡುವುದು-
“ಎರೆ, ಶಾಂತಿಯ ಮನಕೆ!”

ದೇವ, ಹಣತೆಯ ಹೊತ್ತಿಸಿರುವೆನು
ನಿನಗೆ ನನ್ನೆದೆಮನೆಯೊಳ್‌,
ಆಸೆ, ಕಂಬನಿ, ಭಯ, ಬಯಕೆಗಳ
ತೈಲ ತುಂಬಿಹೆ ಸೊಡರೊಳ್‌.
ನೆಲೆಯ ದೀಪವು ಮಿಣುಗುವನಕವೂ
ಮೊರೆಯನಿಡುವೆನು ಮಾನ್ಯ!
ತೈಲ ಬತ್ತಲು, ಸೊಡಲಿದಾರಲು,
ನೀನೆಲ್ಲಿಹೆ – ಶೂನ್ಯ!
*****