ಮನಸ ಜೈನರ ಮಡದಿ

ಮನಸ ಜೈನರ ಮಡದೆಽ ಬಾಽ
ಘನಮನಸಿನ ಗಂಬಿರಳಽ ಬಾಽ
ಘನಮನಸೆಂಬೊ ಗರತ್ಯಾರು ಮೆಚ್ಚಿ
ನೀಲಽ ಬಾಽಽ ನೀಲಽ ಸೀಲಽಽ ಬಾಽಽ
ಸೋಗಿನ ಗೊಂಬೆ ನೀ ಬಾರ ಹೆಸಿಯ ಜಗಽಽಲೀಗೇ ಸೋ ||೧||

ಅನಂದರಾಯರ ಇಗತೇ ಬಾ
ಆದಿಪುರುಷರ ಸತಿಯಳು ಬಾ
ಅದರ ಮ್ಯಾಲ ಪೂರ್ಮಾ ನೀರ್ಮ್ಯಾಲ ಗುರುಳಿ
ಜೂಜ ಬಾಽ ಬಾ ಬಾ ಮೇತ್ರಿ ಬಾಽಽ
ಪುನ್ಯಫಲ ಮೇತ್ರಿ ನೀ ಬಾರಽ ಹಸಿಯ ಜಗಽಽಲೀಗೇ ಸೋ ||೨||

ನಾಗೀಂದ್ರನರಗಲ್ಲವು ಬಾ
ಅರಗಲ್ಲದ ರೂಪವು ಬಾ
ಹೋಯಿತು ಸರ್ಪಾ
ಎಡದಲಿ ಕುಳಿತ
ಕಲ್ಪ ಬಾಽ ಬಾ ಬಾ ಫಣಿಯವು ಬಾ
ಸೋಗಿನ ಗೊಂಬೆ ನೀ ಬಾರ ಹಸಿಯ ಜಗಽಽಲೀಗೇ ಸೋ ||೩||

ಮಂದಗಮನೆ ಮೋವನ್ನೇ ಬಾ
ಗಂಧ ಕಸ್ತುರಿ ಪರಿಮಳ ಬಾ
ನನ್ನಾಣೆ ಬಾಽ ಕಟ್ಟಾಣೆ ಬಾ
ಧನ ಧನಿಯಳು ಬಾಽ
ಕೂಕಮದಾಗಿನ ಭರಣೆ ಬಾರೊಂದ್ಹ ಸೀ ಜಗಽಽಲೀಗೇ ಸೋ ||೪||

ಮಾಣಿಕದಾಗಿನ ಏಣವು ಬಾ
ಜೋಡಮುತ್ತಿನ ಜಾಣೇ ಬಾ
ಚಂದ್ರನ ಸೊಸಿಯೇ ಬಾ
ಇಂದ್ರನ ಸತಿಯಳು ಬಾ
ಭಂಗರದಾಗಿನೆ ಭರಣೆ ಬುರೊಂದ್ಹಸಿಯ ಜಗಽಽಲೀಗೆ ಸೋ ||೫||

ಮಂಗಳ ಮಹಿಮನ ರುಣೀ ಬಾ
ಶ್ರಿಂಗಾರದ ಮುದ್ದಾನೇ ಬಾ
ಕುಂಬಕುಚಗಳು ನಲನಲಿದಾಡುತ
ರಂಬೇ ಬಾ ದೇಶದ ಗೊಂಬೆ ಬಾ
ಅಂಗೈನಿಂಗ ನೀ ಬಾರಽ ಹೆಸಿಯ ಜಗಽಽಲೀಗೇ ಸೋ ||೬||
*****

ಸೋಬಾನದ ಹಾಡುಗಳು

ಮಾನವದೇಹದಲ್ಲಿ ಪೂರ್ಣಸೌಂದರ್ಯವು ಪ್ರಕಟವಾಗುವ ಕಾಲಗಳು ಎರಡು. ಒಮ್ಮೆ ಎಳಗೂಸಿದ್ದಾಗ, ಇನ್ನೊಮ್ಮೆ ಪ್ರಾಯವೇರುವಾಗ. ಯೌವನದ ಬೆಡೆಗು ಶೃಂಗಾರರಸಕ್ಕೆ ಉದ್ದೀಪಕ. ಹೆಣ್ಣಿನ ಶೃಂಗಾರವನ್ನು ಹೆಣ್ಣುಮಕ್ಕಳೇ ಬಣ್ಣಿಸಿದ್ದು ಸೋಬಾನದ ಹಾಡುಗಳಲ್ಲಿ ನೋಡಲಿಕ್ಕೆ ಸಿಗುವಂತಿದೆ. ಶೃಂಗಾರವನ್ನು “ನೈಸರ್ಗಿಕವಾಗಿ ಲಜ್ಜಾಶೀಲರಾದ ನಾರಿಯರು ವರ್ಣಿಸಿದ ರೀತಿಗೂ ಸ್ವಚಂದತೆಗಾಸ್ಪದವಿರುವ್ ಪುರುಷರು ವರ್ಣಿಸಿದ ರೀತಿಗೂ ಮಹದಂತರವಿರುತ್ತದೆ. ಲಾವಣಿಯೊಳಗಿನ ಶೃಂಗಾರಕ್ಕೂ ಸೋಬಾನದ ಹಾಡುಗಳೊಳಗಿನ ಶೃಂಗಾರಕ್ಕೂ ಸರಿಹಚ್ಚಿ ನೋಡಿದರೆ ನಮ್ಮ ಈ ಅಭಿಪ್ರಾಯವು ಸ್ಪಷ್ಟವಾಗುವುದು. ಕವಿಚರಿತ್ರೆಯಲ್ಲಿ ಬಂದ ಕುಮಾರವ್ಯಾಸನ ದ್ರೌಪದಿಯ ಚೆಲುವಿಕೆಯ ವರ್ಣನೆಗೂ ರಾಜಶೇಖರವಿಳಾಸ ಮುಂತಾದ ಕಾವ್ಯಗಳೊಳಗಿನ ವೇಶ್ಯೆಯರ ವರ್ಣನೆಗೂ ಇರುವ ವ್ಯತ್ಯಾಸವನ್ನು ಲಕ್ಷ್ಯಕ್ಕೆ ತಂದುಕೊಂಡರೆ ಮೇಲ್ಕಂಡ ನಮ್ಮ ಮಾತಿನ ಭಾವವು ಇನ್ನಿಷ್ಟು ಸ್ಫುಟವಾಗುವುದು.

ಹೆಣ್ಣುಮಕ್ಕಳು ವರ್ಣಿಸಿದ ಶೃಂಗಾರದಲ್ಲಿ ಒಂದು ಸಹೆಜವಾದ ಜೋಕೆಯಿದೆ. ಗಂಡಸರ ಹಾಡುಗಳಲ್ಲಿ ರೂಪವರ್ಣನೆಯು ಮೂರು ವಿಧದಲ್ಲಿ ಮಾಡಲ್ಪಟ್ಟಿದೆ. “ಮನಸ ಜೈನರ ಮಡದಿ” ಎಂಬ ಈ ಹಾಡಿನಲ್ಲಿ ಇಡೀ ಯೌವನಕ್ಕೆ ಸಂಬಂಧವಾಗುವ ಉಪಮೆಗಳಿವೆ. ಇದು ಒಂದು ವಿಧ. “ಹಿಂಬಳಿ ಮುಂಬಳಿ” ಮತ್ತು “ರನ್ನದುಡುಗುಣಿ” ಎಂಬೆರಡು ಹಾಡುಗಳಲ್ಲಿ ಮೈ ಮೇಲಿನ ಅಲಂಕಾರಗಳ ವರ್ಣನೆಯಿಂದ ಶೃಂಗಾರಕ್ಕೆ ಬಣ್ಣ ಕೊಡಲು ಯತ್ನಿಸಲಾಗಿದೆ. ಇದು ಎರಡನೆಯ ವಿಧ. ಇನ್ನು “ಹಸುಮಗಳಽ ನೀಲಮ್ಮ” ಮತ್ತು “ಹಣಿ ಎಂಬು ಭಾಂವಕ” ಎಂಬೆರಡು ಹಾಡುಗಳಲ್ಲಿ “ಅಕ್ಕ ಭಾವಽಗ ವರನಂದ” “ನಾರೀಗಿ ತಮಗ ವರನಂದ” ಮುಂತಾದ ಮಾತುಗಳಿಂದ ಪರ್ಯಾಯದಿಂದ ರೂಪವನ್ನು ವರ್ಣಿಸಿದಂತಿದೆ. ಇದು ಮೂರನೆಯ ವಿಧ.

“ಬಾಲಿ ತಾ ಮೈನೆರದು” ಎಂಬ ಹಾಡಿನ ಮೊದಲಿನ ನಾಲ್ಕು ನುಡಿಗಳಲ್ಲಿ ಖುತುಸಮಯದ ತಾತ್ಕಾಲಿಕ ಮುಖಲಕ್ಷಣ ಮುಂತಾದವುಗಳ ಸೊಗಸಾದ ವರ್ಣನೆಯಿದೆ. ಇದು ನಾಲ್ಕನೆಯ ವಿಧವೆಂದು ಹೇಳಬಹುದು.

“ಮನಸ ಜೈನರ ಮಡದಿ”

ಈ ಹಾಡಿನಲ್ಲಿ ಮೊದಲಿನಿಂದ ಕೊನೆಯವರೆಗೆ ಒಂದೇ ಸಂದರ್ಭದ ವರ್ಣನೆಯಿರುವುದರಿಂದ ತಿಳಿದುಕೊಳ್ಳಲಿಕ್ಕೆ ನಡುವೆ ಎಲ್ಲಿಯೂ ತೊಂದರೆ ಬರುವಂತಿಲ್ಲ.

ಛಂದಸ್ಸು:- ಮಂದಾನಿಲರಗಳೆಗೆ ಸಮೀಪವಾಗಿದೆ.

ಶಬ್ದ ಪ್ರಯೋಗಗಳು:- ಮನಸ ಜೈನರು=ಹಿಂದಕ್ಕೆ ಬಹಳ ಘನವಂತಿಕೆಯಿದ್ದ ಒಂದು ಜಾತಿ. ಗಂಬಿರಳ=ಗಂಭೀರಳು. ಸೋಗಿನ=ವಯ್ಯಾರದ. ಇಗತಿ=ಯುಕ್ತಿ ಯುಳ್ಳವಳು. ಜೂಜ=ಪಂಥಗಾರ್ತಿ. ಹಸಿಯ ಜಗಲಿ=ಲಗ್ನ ಫಲಶೋಭನಗಳ ಪೀಠ. ನಾಗೀಂದ್ರನ ಅರಗಲ್ಲ=ಹಾವಿನ ಹೆಡೆಯೊಳಗಿನ ಮಣಿ. ಅರಗಲ್ಲು=ಅರಸುಗಲ್ಲು (ರತ್ನ). ಕಲ್ಪ=ತಲ್ಪ(?) ಮಾಣಿಕದಾಗಿನ ಏಣ, ಭಂಗರದಾಗಿನ ಭರಣೆ=ಮಾಣಿಕದ ಏಣು, ಭಂಗಾರದ ಭರಣೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾರತ ಕಮ್ಮಿಯಿಲ್ಲ
Next post ಹಣತೆ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

cheap jordans|wholesale air max|wholesale jordans|wholesale jewelry|wholesale jerseys