ಚದುರೆ ನೀನಿರದಾಟ
ಅದೆಂತು ಚದುರಂಗದಾಟ
ನೀ ಸದರ ಮಾಡಿ ಮದಿರಂಗಿ ಕೈಗಳಲಿ
ಕುದುರೆ ನಡೆಸುವಾಟ
ಅದುವ ಚದುರಂಗದಾಟ

ಬಟ್ಟ ಕಂಗಳ ಅಂಗಳದಾಟ
ಕೂದಲ ಸುಳಿಯಲಿ ಬೆರಳುಗಳಾಟ
ಅಂಗಾಂಗವೆಲ್ಲಾ ಕಚಗುಳಿಯಾಟ
ರಕ್ಷಣಾಭಂಗ ತಕ್ಷಣದಾಟ

ತದೇಕ ಚಿತ್ತ ನೋಡುವಾಟ
ಚಿತ್ತವೃತ್ತಿಯ ಮರೆಸುವಾಟ
ಜುಮ್ಮನೆ ದಾಳಿ ಮಾಡುವಾಟ
ಅಮ್ಮಯ್ಯ ಎಂದು ಸೋಲೊಪ್ಪುವಾಟ
ಸೋತರು ಗೆದ್ದರು ನಗು ತಪ್ಪದಾಟ

ಆಟದ ಹೊತ್ತು ಕಳೆಯುವಾಟ
ಕೋಟೆ ಕೊತ್ತಲ ಹಿಡಿಯುವಾಟ
ಇಟ್ಟಡಿ ಹಿಂದಕ್ಕೆ ತೆಗೆಯದಾಟ
ಅರೆ! ಆಟವೊಂದು ನೆಪದಾಟ

ಮಾಗಿಯ ಚಳಿಗೆ ನಿಟ್ಟುಸಿರಾಟ
ಸಾಗಿದ ದಿನಗಳ ನೆನಪಿಸುವಾಟ
ಆಗಾಗ ದೇವರ ಕೋರುವ ಆಟ
ಸ್ವರ್‍ಗವ ಭೂಮಿಗೆ ಕರೆತರುವಾಟ
*****