Home / ಕವನ / ಕವಿತೆ / ಶ್ರೀಕೃಷ್ಣನ ಕೊಳಲಿಗೆ

ಶ್ರೀಕೃಷ್ಣನ ಕೊಳಲಿಗೆ

ಏನು ಮುನ್ನಿನ ಜನ್ಮದಲಿ ಪುಣ್ಯಗೈದಿರುವೆ
ಇಂಚರದ ಕೊಳಲೆ ನೀನು ?
ಗಾನಲೋಲನ ಕೈಯ ಸೇರಿ ಕುಣಿದಾಡಿಸಿದೆ
ಕಮಲೋದ್ಧವಾಂಡವನ್ನು!
ಆರೋಹಣ ಸ್ವರದಿ ಸುಪ್ತಿಯಲ್ಲಿಹ ಜಗವ
ಜಾಗೃತಿಯನೊಂದಿಸಿದೆಯೊ !
ಅವರೋಹಣ ಸ್ವರದಿ ಎಚ್ಚತ್ತ ಜಗದ ಬಗೆ-
ಯನ್ನು ನಿನ್ನೆಡೆಗೆಳೆದೆಯೊ!
ನಂದನಂದನನ ನನ್ನಿಯ ಹಾಡನೊಡಗೊಂಡ
ಚೆಂದವಹ ನಿನ್ನ ದನಿಯು-
ಕಂದರನು ಒಳುದಾರಿಯಲ್ಲಿ ನಡೆಯಿಸುವ ಹೆ-
ತ್ತಮ್ಮನಿನಿದಾದ ನುಡಿಯು!
ಗೋಪಾಲಬಾಲಕರು ತಾಪಕೊಳಗಾಗದೊಲು
ಶ್ರೀಕೃಷ್ಣನೇನು ಗೈದ?
ನೀ ಪೇಳು, ನಿನ್ನ ಮಧುರವದಿಂದಲವನಾವ
ಮೋಹಮಂತ್ರವನೂದಿದ?
ನಲ್ಲೆಯರ ಮುಂದೆ ಗೋವಿಂದನಾಜ್ಞೆಯಲಿ ನೀ-
ನಾವ ಪದ ಪಳ್ದೆ ? ಎಂತು ?
ಗೊಲ್ಲಹೆಂಗಳೆಯರಿಗೆ ಸಂಸಾರದನುಭವವು
ಬೆಲ್ಲದಂತಾದುದೆಂತು ?
ಸತ್ಯಕ್ಕೆ ಸಹಕಾರಿ ಮಿಥ್ಯಕ್ಕೆ ಕಡುವೈರಿ
ಸಜ್ಜನರ ದುಃಖಹಾರಿ-
ಮತ್ತೆ ನಿನ್ನಾ ಗಾನವಾಗಿದ್ದಿತೈ ಕುಜನ-
ವಂಶಕ್ಕೆ ಹಿರಿಯ ಮಾರಿ!
ಸಂತಸದ ಸಿರಿಮನೆಯು ಸಂತೃಪ್ತಿಯರಮನೆಯು
ಜ್ಞಾನಪೀಯೂಷಝರಿಯು,
ಶಾಂತಿಯಾಗರವು ನಿಶ್ಚಿಂತೆಯಾ ತವರೂರು
ನಿನ್ನ ಮಂಜುಲಲಹರಿಯು!
ನಿನ್ನ ಸ್ವರ ಕೇಳದಿರೆ ಚೆನ್ನ ಕಿಟ್ಟನ ಮರೆತು
ಬನ್ನಗೊಂಡಿಹುದು ಬುವಿಯು;
ಧನ್ಯ ವೇಣುವೆ, ನಮಗೆ ಕೇಳದಿಹುದೇಕೀಗ.
ನಿನ್ನ ಮಾಧುರ ಮುರಲಿಯು?
ದ್ವಾಪರದಿ ನುಡಿಸಿದಾ ಗೋಪಾಲ ನಿನ್ನನ್ನ-
ದೇಕೀಗ ನುಡಿಸದಿಹನು?
ತಾಪ ಕೂಪದೊಳುರುಳಿರುವ ಜಗದ ಜನರನ್ನು
ತಣಿಸದೇತಕೆ ತಡೆದನು?

ಇದೇ ಭಾವಸಮಾಧಿಯೊಳಿರುವಂದು, ಒಳಗಿವಿಯಲೊಂದು

ಕೊಳಲುಲಿಯ ಇನಿದನಿ ಮಿಡಿದು ಎದೆಯನರಳಿಸಿತು:

ನುಡಿಸದೇಕಿಹ? ದೇವ ಜಗದಾದಿಯಿಂದೆ ಎಡೆ-
ಬಿಡದೆ ನುಡಿಸುತಲಿರುವನು;

ನುಡಿಸುವನು ಜಗವು ಮುಗಿವಾ ವರೆಗೆ ಮುಂದೆಯೂ
ಎಂದಿನಂದದಲಾತನು.

ಭೋಗಮಲದಲಿ ಮುಚ್ಚಿ ಹೋಗಿರುವ ನಿನ್ನ ಕಿವಿ-
ಗಳಿಗೆ ಕೇಳಿಸದಿರುವುದೋ!
ತ್ಯಾಗದಿಂದಾ ಮಲವ ನೀಗಿದರೆ ನಿನಗೆ ನಿಜ-
ವಾಗಿಯಾ ದನಿ ಕೇಳ್ವುದೋ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...