ದ್ವಾ ಸುಸರ್‍ಣಾ ಯುಯುಜಾ…..
ಉಪನಿಷತ್ತಿನ ಶ್ಲೋಕದ ಅವಿನಾಭಾವದ
ಹಕ್ಕಿಗಳೇ ಈ ಸಾಹಿತ್ಯ ಮತ್ತು ಧರ್ಮ
ಅದನ್ನು ಬಿಟ್ಟು ಇದಿಲ್ಲ ಇದನ್ನು ಬಿಟ್ಟು ಅದಿಲ್ಲ
ಬೀಜ ವೃಕ್ಷ ನ್ಯಾಯದಂತೆ ಗುದ್ದಾಡಲಿಲ್ಲ ಇವು
ಒಂದನ್ನೊಂದು ಒರಗಿ ನಿಂತವು ಗುದಮುರಿಗೆ
ಮುಗಿಯದ ಸೆಣಸಾಟ ಆಹ್ಲಾದ ಕೂಟ
ಒಂದಕ್ಕೊಂದು ನೀರೆರೆದು ಒಮ್ಮೊಮ್ಮೆ
ಬೇರು ಕೊಯ್ದು ಬೆಳೆದಿವೆ ಬೆಳೆಯುತ್ತಿವೆ.
ಈಗಲೂ ಚೀಸಿ ರೆಕ್ಕೆ ಹಾರುತ್ತದೆ ಸಾಹಿತ್ಯ
ದಿಕ್ಕುದಿಕ್ಕಿಗೂ ಚಲಿಸಿ ಬದಲಾಗಿ ನಿಯಮ ರಾಹಿತ್ಯ
ಕುಳಿತಿದೆ ಮಂಕಾಗಿ ಮೂಲೆ ಹಿಡಿದು ಧರ್ಮ
ತಿಕ್ಕಿ ತೊಳೆಯಬೇಕು ಅದು ನಮ್ಮ ಕರ್ಮ
ಅದಿಲ್ಲದ್ದರೆ ಇದು ಸಾಯುತ್ತದೆ. ಇದು ಅದನ್ನು ಕಾಯುತ್ತದೆ.
ಇರಲಿ ಹೀಗೇ ಒಂದಕ್ಕೊಂದು
ಉರುಳಾಗದೇ ತಿರುವಿ ಹಾಕುವ
ಒರಳಾಗದೇ ನಿಯತಿ ಕೃತ
ನಿಯಮ ರಹಿತ ಧರ್ಮಾವಲಂಬಿತ.
*****
‘ಕಾಲಾತೀತ’ ಅಭಿನಂದನಾ ಗ್ರಂಥ (ಆದಿ ಚುಂಚನಗಿರಿ ಶ್ರೀಗಳ)ಕ್ಕಾಗಿ ಬರೆದ ಕವಿತೆ.