Home / ಕವನ / ಕವಿತೆ / ಭೂದೇವಿಯ ನೋಟ

ಭೂದೇವಿಯ ನೋಟ

ಜಗದ ಮೌನವನೊಡೆದು ಗಗನ ಗರ್ಭವ ಸೀಳಿ
ಜಲದ ಶಾಂತಿಯ ಕಡೆದು ಯುಗಯುಗದ ಬಗೆ ಕನಲಿ
ಉರಿವ ಬೆಂಕಿಯ ಜ್ವಾಲೆ ಹರಿವ ಗಾಳಿಯನಾಳಿ
ಮಾನವರ ಜೀವನವ ಬಲಿಗೊಳ್ಳುತಿದಿರಾಳಿ
ಸತ್ಯ ಧರ್ಮದ ಹೆಸರ ಬಗೆಯೆತ್ತಿ ಕರೆಯುತಿದೆ
ಲೋಕವೇ ಬರೆದಿಟ್ಟ ಶಾಸನವ ಮುರಿಯುತಿದೆ
ಕ್ರಾಂತಿ ಮಾರಿಯ ಬರವು ಲೋಕಕಾಯ್ತು.

ಮೂಡ ಪಡು ಬಡಗ ತೆಂಕಣದ ಮೂಲೆಗಳಿಂದ
ಬದುಕುಗಳ ಬಗೆಯೊಗೆದು ಕಾಲದೀ ಕರೆಯಿಂದ
ಹೆತ್ತೊಡಲ ಮಮತೆಯನು ಹೊತ್ತೊಡಲ ಶಾಂತಿಯನು
ತಿಳಿಯಲಾರದ ಹೃದಯ ನೂಕುತಿದೆ ಮೋಹವನು
ಈ ಮಣ್ಣು ವಿಷ ಹುಣ್ಣು. ನುಡಿವೆಣ್ಣು ಸುಡುಗಣ್ಣು
ಧರ್ಮದೀ ಹೆಸರಿನಲಿ ಕರ್ಮಗಳನುರಿಸುತಿದೆ
ಆಸೆಗಳ ಬಗಯಿಂದ ಪ್ರಳಯವಾಯ್ತು.

ಲೋಕದಾಯುಷ್ಯದಲಿ ಯುಗಯುಗಗಳುರುಳಿದುವು
ಯುಗದ ಯಂತ್ರವ ನಡೆಸಿ ನೋಡುವನು ರವಿ ದಿನವು
ರಜನಿಯನ್ನಾಳುತಲಿ ಕಳದ ಶಶಿ ನಿಶಿ ಹಲವು
ಜಲರಾಶಿಯೇರಿನಲಿ ಪ್ರಳಯಗಳು ದಾಟಿದುವು
ಆಸೆಗಳ ನೆಲೆಯಿಲ್ಲ, ದೋಷಗಳ ಬಗಯಿಲ್ಲ
ಒಂದು ಗುಣ ಒಂದು ನೆಲೆ ಒಂದು ಕೃತಿ ಒಂದು ಸ್ಮೃತಿ
ಶಾಂತಿಧರ್ಮದ ಬೀಡು ಪಾಲಿಗಾಯ್ತು.

ಜಗದಗಲ ನಭದಗಲ ಜಲಗಗನ ರಣವಾಗಿ
ಭೀಕರದ ದೃಶ್ಯದಲಿ ಕ್ರಾಂತಿ ರಾಕ್ಷಸಿಯಾಗಿ
ಶಾಂತಿ ದಾಂತಿಗೆ ಮಣಿವ ಮಕುಟಗಳ ಹಗೆಯಾಗಿ
ಜಗದ ಬದುಕನು ಮುರಿವ ಕಾಣದಿಹ ತೊಡರಾಗಿ
ನುಡಿಯೊಂದು ನಡೆಯೊಂದು ಮನವೊಂದು ಗುಣವೊಂದು
ಕರುಣರಸಕಿಂಬಿಲ್ಲ ಅರುಣರಸಧಾರೆಯಲಿ
ಬಿಸಿ ನೆತ್ತರೀಂಟುತಿದೆ ಕಾಲವಿಂದು.

ಬಂಡೆಬಂಡೆಗಳುರುಳಿ ಹುಡಿಯಾಗಿ ಹಸರಳಿಸಿ
ಬದುಕಿನಾಗರವಾದ ಲೋಹಗಳು ರೂಪಳಿಸಿ
ಸುಖದ ಬೀಡೆನಿಸಿರ್ದ ಓಷಧಿಯು ಗುಣ ಮರೆಸಿ
ಗಾಳಿ ನೀರುಗಳಲ್ಲಿ ಹಸಿದಿಹವು ಮೈಮರೆಸಿ
ಮುಟ್ಟಿದರೆ ನೋಡಿದರೆ ಕೇಳಿದರೆ ಹೇಳಿದರೆ
ದೇಹವನೆ ಸುಟ್ಟಾವು ಜೀವವನೆ ಕೊಂಡಾವು
ಜಗದ ಜೀವದ ಜೀವ ಮೃತ್ಯುವಾಯ್ತು.

ಶಾಂತಿ ಸತ್ಯವು ಸೆರೆಗೆ ದ್ವೇಷಕರ್ಮವು ಹೊರಗೆ
ಸಾಧು ಶೌಚವು ಮರೆಗೆ ಪಾಪಸೂತಕ ಕೊಲೆಗೆ
ಸುಖದ ಸಂತಸವಡಗೆ ಹಿಂಸೆ ಭಯಗಳು ನೆರೆಗೆ
ಪುಣ್ಯಭೂಮಿಯ ಮಣ್ಣು ಮನೆಯಾಯ್ತು ಹಣಗಳಿಗೆ
ಇಲ್ಲಿ ಮೊರೆಯಲ್ಲಿ ಸೆರೆ, ಇಲ್ಲಿ ಭಯಮಲ್ಲಿ ಕೊಲೆ
ಉಸಿರುಸಿರು ಹೂಗಯಾಗಿ ಸಿಡಿಮದ್ದು ಕರೆದಾವು
ತವರಿಗೇ ಕಿಚಿಕ್ಕಿ ಸುಡುವುದಾಯ್ತು.

ಭೂಮಿಯಾಚೆಯ ಕರೆಗೆ ತನುವೊಡ್ಡಿ ನಡೆದಿಹರು
ಆಚೆ ಈಚೆಯ ಕೃತಿಗೆ ಸಿಲುಕಿ ಮರೆಯಾಗಿಹರು
ಹಸಿವಿಗಾಹುತಿಯಾಗಿ ಕೆಲರು ಶಿಲೆಯಾಗಿಹರು
ನೀರಡಸಿ ಉಸಿರಾರಿ ಹಲರು ಹೆಣವಾಗಿಹರು
ಬದುಕೇಕೆ ಜಗೆಯೇಕೆ ಹೊಲಸು ಜೀವನವೇಕೆ
ಕಾಲರುದ್ರನ ಕರೆಗೆ ತಲೆವಾಗಿ ನಡೆದಿಹರು
ಪ್ರೇಮಪಾಶವ ಹರಿದು ಹೃದಯದಿಂದ.

ಆಲದೆಲೆ ನೌಕೆಯಲಿ ಕ್ಷೀರಸಾಗರದಲ್ಲಿ
ಕ್ರೀಡಿಸುವ ವಿಷ್ಣುವಿನ ಸುಳಿವೆಲ್ಲಿ ಇರವೆಲ್ಲಿ?
ಪಾರ್ವತಿಯ ಕೈಸೇರಿ ಕೈಲಾಸಗಿರಿಯಲ್ಲಿ
ನೃತ್ಯಲಾಸ್ಯದಿ ನಲಿವ ಶಂಕರನ ನಡೆಯೆಲ್ಲಿ?
ಕಾಣೆವೋ ಮರೆತೆವೋ ತಿಳಿಯೆವೋ ನೋಡೆವೋ
ದೇವರಿಹ ನೆನವೊಂದು ಭಯವೊಂದು ಕಾಣದೀ
ವಿಲಯಭೈರವಮೂರ್ತಿ ಚೇಷ್ಟೆಯಿಂದ.

ಅವತಾರಪುರುಷರಿಂದಾಗದಾ ನವಯುಗದ
ನಿರ್ಮಾಣ ಮಾಡುವೆವು ನಿಲಿಸುವೆವು ಹೊಸ ಜಗದ
ಕೋಟೆಯಲಿ ಶಾಂತಿಯನ್‌ ಕರೆತಂದು ಸವಿಸುಖದ
ಪೆಂಪುಬಿಂಪುಗಳುಣಿಸಿ ತಣಿಸುವೀ ಹಿರಿಮನದ
ಕಾಣದಿಹ ಕನಸುಗಳು ಕೇಳದಿಹ ವಾಣಿಗಳು
ತೋರುತಿಹವೆಮಗಿಂದು ನುಡಿಯದಿಹ ಸತ್ಯಗಳು
ಕಾಲರುದ್ರನ ನೃತ್ಯದೆಸಕದಿಂದ.

ಇದೊ ಸಿದ್ದರಾಗಿಹೆವು ಕಾಲಪುರುಷನ ಕರೆಗೆ
ಇದು ನೋಡಿ ಅದು ಕೇಳಿ ನೀಗಿ ನೆಮ್ಮದಿಯ ಬಗೆ
ಈ ಬಾಳು ಈ ಗೋಳು ಸಾಕೆನಿಸೆ ಭೂತಾಯ್ಗೆ
ಸಾವು ನೋವುಗಳೆಲ್ಲ ಹೋಗಲಿಂದೇ ಕೊನೆಗೆ
ಹೂಸ ಯುಗದ ಸೋದರರು ಮಂಗಳವ ಹಾಡುವರು
ಕಲ್ಯಾಣಮಂಟಪವ ಕಟ್ಟುವರು ಮೆರೆಯುವರು
ಭೂತಾಯ ಸಿಂಗರಿಸಿ ತಿಲಕವಿರಿಸಿ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...