ಕಣ್ಣು ಮುಚ್ಚಿ ದೀರ್ಘ
ಪ್ರಾರ್ಥನೆ ಸಲ್ಲಿಸಿ,
ತಲೆ ತುಂಬ ಎಳೆದ
ಮುಸುಕಿನಡಿಯಲ್ಲಿ
ಕಣ್ಣ ಮುತ್ತುಗಳ
ಬಳಬಳನೆ ಉದುರಿಸಿ,
ಕರುಳಿಗೆ ಹೊತ್ತಿಕೊಂಡ
ಬೆಂಕಿಯ ಜ್ವಾಲೆ-
ಹೊರ ಚಾಚದಂತೆ
ನಂದಿಸಿ ಮೇಲೇಳುವ
ಹೊಗೆಯ ನೋಡುತ್ತ
ನಿಟ್ಟುಸಿರು ಬಿಡುತ್ತ
ಗೆದ್ದು ಬರುವನೆಂದು
ವಿಜೃಂಭಣೆಯಿಂದ
ಬರಮಾಡಿಕೊಳ್ಳಬೇಕೆನ್ನುವ
ನಿನ್ನಾಸೆಯ ಕೆಂಪುಬಣ್ಣ
ಪತ್ರಿಕೆಯ ‘ತಲ್ಲಾಕ್’
ಶಬ್ದ ಕೇಳಿ ಬಿಳುಪಾಗಿ
ಬದುಕೆಳೆದ ಬರೆಗಳು
ಚಾವಟಿಯ ಏಟುಗಳು
ಅಲ್ಲಾಹ್‌ನಿಗೆ ಸಲ್ಲಿಸಿದ
ವ್ಯರ್ಥ ಪ್ರಾರ್ಥನೆಗಳು
ಮನದ ಬಣ್ಣದ ಕನಸುಗಳು
ಒಡೆದು ಚೂರಾದ ಆಸೆಗಳು
ರೆಕ್ಕೆ ಮುರಿದ ಹಕ್ಕಿಯಂತೆ
ಚಾರ್‌ಮಿನಾರದ ಚೌಕದಲಿ
ಗೋಳಿಟ್ಟ ನೂರೇನ್ನಳ
ಶಾಪ ಆಕಾಶದಲ್ಲಡಗಿರುವ
ಮಿಂಚು ಸೆಳಕು ಬಿಜಲಿಗಳಿಗೆ
ತಟ್ಟದಿರುವದೆಂತು?
*****
(ಟಿಪ್ಪಣಿ:- *ನೂರೇನ್-ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕನ ಮಾಜಿ ಪತ್ನಿ)