ಕನ್ನಡನಾಡಿನ ಕುಮಾರನ ಅಂತ್ಯ ಸಂಸ್ಕಾರನಾ ರಾಜಕಾರಣದಲ್ಲಿನ್ನೂ ಕೊಮಾರನಾದ (ಬಚ್ಚಾ) ಕುಮಾರಸ್ವಾಮಿ ಏಟು ಪಸಂದಾಗಿ ಮಾಡಿದ ಅಂಬೋದ್ನ ನೀವೆಲ್ಲಾ ಮನೆಯಾಗೇ ಕುಂತು ಟವಿನಾಗೆ ಗಾಬರಿಬಿದ್ದು ನೋಡಿ ಹೊಟ್ಟೆಗೆ ಹಾಲು ಹೊಯ್ಕೊಂಡಿದ್ದೀರಿ. ದೇಶದ ಪಾಪ್ಯುಲರ್ ಫೀಗರ್ಗುಳು ಲೀಡರ್ಸ್ ಈ ಲೋಕಬಿಟ್ಟು ಹೊಂಟಾಗ ಅವರ ಅಭಿಮಾನಿಗಳ ಅನುಯಾಯಿಗಳ ಪ್ರೀತಿಯ ಕ್ಲೈಮಾಕ್ಸ್ ಹಿಂಸಾಚಾರಕ್ಕೆ ತಿರುಗೋದು, ಹೆಣ ಬೀಳೋದು ಗುಡ್ ಓಲ್ಡ್ ಸಿಸ್ಟಂ ಆಗೇತ್ರಿ. ಇಂದಿರಮ್ಮ ಹೋದಾಗ್ಲೂ ಸಿಕ್ಕ ಸಿಕ್ಕ ಸಿಖ್ ಜನಾಂಗದೋರ ಹೆಣ ಎತ್ತಿದರೂ ಇಂದಿರಮ್ಮನ ಅಂತ್ಯಸಂಸ್ಕಾರ ಈ ಪರಿ ಅದ್ವಾನವಾಗಿ ಗಬ್ಬೆದ್ದು ಹೋಗ್ಲಿಲ್ಲ. ಸಿಲಿಮಾದ ಅಣ್ಣಾದೊರೆ, ಎಂ.ಜಿ.ಆರ್. ನಂತ ಮೇರುನಟ ಸತ್ತಾಗ್ಲೂ ಗಲಭೆ ಹಿಂಸೆಗಳಾದ್ರೂ ಅದ್ರಾಗೆ ರಾಜಕಾರಣಿಗಳ ಫೋಲಿಟ್ರಿಕ್ಸ್ ಸೇಡಿತ್ತು. ಎನ್.ಟಿ.ಆರ್. ಹೊಂಟಾಗ ಭಾರಿ ಅನಾಹುತವಾಗೋ ಸಂಭವ ಇದ್ದರೂ ಅಳಿಯ ಚಂದ್ರ ಬಾಬು ನಾಯ್ಡು ಅರ್ಧಚಂದ್ರ ಪ್ರಯೋಗ ಮಾಡಿ ಇಡೀ ಆಂಧ್ರಾನೇ ತನ್ನ ಮುಷ್ಟಿನಾಗೆ ಮಡಿಕ್ಕಂಡು ಎಂಟಿ‌ಆರ್ಗೆ ಎಳ್ಳುನೀರು ಬಿಟ್ಟ. ಆದ್ರೆ ಕರ್ನಾಟಕ್ದಾಗೆ ಆಗಿದ್ದೇನು? ಯಾಕಿಂಗಾತು! ಈ ಕುಮಾರಗೌಡ ಪ್ರಮ್ ದಿ ಬಿಗಿನಿಂಗ್ ಯಡವಟ್ಟೆ. ಸಿ.ಎಂ. ಆದೋರೆಲ್ಲಾ. ಡಾ. ರಾಜ್ ದರ್ಶನ ಪಡ್ದು ಬರೋದು ಹ್ಯಾಬಿಟ್ಟಾಗಿ ಹೋಗಿತ್ತಲ್ಲವರಾ. ರಾಜ್ ದರ್ಶನ ಪಡ್ದು ಬರೋದು ಅಂದ್ರ ಕಲಾದೇವಿಗೇ ಗೌರವಿಸಿದಂಗೆ ಅಂಬೋ ವಿಶಾಲ ಮನೋಭಾವ ಕೆಲವರಲ್ಲಿತ್ತು. ಆದರೆ ಈವಯ್ಯ ದರ್ಶನ ಪಡೆದಿದ್ದು ಅವರು ಕಳೆಬರವಾದ ಮೇಲಷ್ಟೆ. ರಾಜ್ ಕಣ್ಮುಚ್ಚಿದಾಗ ಪಶ್ಚಾತ್ತಾಪದಿಂದ್ಲೋ ಭಯಬಿದ್ದೋ ಅಪ್ಪನ್ನ ಮುಂದಿಟ್ಕೊಂಡು ರಾಜ್ ಮನೆಗೇ ವಕ್ಕರಿಸಿದ ಕೊಮಾರ, ತಾನಾಗಿಯೇ ರಾಜ್ ಕುಟುಂಬದವರೊಡನೆ ರಾಜ್ ಅಂತ್ಯ ಸಂಸ್ಕಾರದ ಹೊಣೆ ಒಪ್ಪೋಸ್ಕೊಂಡ. ಸಕಲ ಸರ್ಕಾರಿ ಗೌರವ ಕೊಡ್ತೀನಿ ಅಂತ ಜಂಭ ಕೊಚ್ಕೊಂಡ. ಕರ್ನಾಟಕದ ಜನ ಭೇಷ್ ಅಂತು. ಆಮೇಲೆ ನಡೆದದ್ದನ್ನೆಲ್ಲಾ ನೋಡಿ ಅದೇ ಜನ ಬೇಹೋಶಾತು. ರಾಜ್ ಮನೆ ಮುಂದೆ ಮೂವತ್ತು ಸಾವಿರದ್ಮೇಲೆ ಮಂದಿ ಜಮಾಯಿಸಿದ್ದರೂ ಅಲ್ಲಿಗೆ ಬಂದೋರು ಮೂರು ಮತ್ತೊಂದು ಜನ ಫೋಲೀಸಪ್ಪಗಳು. ರಾಜ್ ರ ನಿಕಟವರ್ತಿಗಳಾದ ಕೆ೦ಪಯ್ಯ ಭರಣಿ ಬಿದರಿ ಕಣ್ಣಿಗೇ ಬೀಳಲಿಲ್ಲ. ಇನ್ನು ಸಿಯಾಳ, ಅಜಯಕುಮಾರಸಿಂಗು ಅದೆಲ್ಲಿ ಸತ್ತು ಹೋಗಿದ್ದರೋ ಕೊಮಾರ್ನೇ ಬಲ್ಲ. ರಾಜ್ ರ ಶವ ಮನೆಬಿಟ್ಟದ್ದೇ ದೊಡ್ಡ ತ್ರಾಸಾತು. ಡಾ. ರಾಜ್ ಕನ್ನಡನಾಡಿನಲ್ಲಿ ಗಳಿಸಿದ ಗೌರವ, ಜನರಿಗೆ ಅವರಲ್ಲಿದ್ದ ಪ್ರೇಮ ಸೇರಬಹುದಾದ ಅಪಾರ ಜನಸ್ತೋಮ ಯಾವುದರ ಅಂದಾಜಿಲ್ಲದ ಸಿ.ಎಂ. ಅಂಬೋ ದ್ರಾಬೆ ಮತ್ತು ಆತನ ಕಾಕಿಪಡೆ ಅಮಾನವೀಯವಾಗಿ ನಡ್ಕೊಂಡಿದ್ದು ಸರ್ಕಾರಕ್ಕೆ ಮಾಸದ ಕಪ್ಪು ಚುಕ್ಕೆ ಆಗೋತಷ್ಟೇ ಅಲ್ಲ ಅಂತ್ಯ ಸಂಸ್ಕಾರವಾ ಹ್ಯಾಂಗ ಮಾಡಬಾರ್ದು, ಹ್ಯಾಂಗ್ ಆತು ಅಂಬೋದ್ಕೆ ಒಂದು ಡಾಕ್ಯುಮೆಂಟರಿ ಫಿಲಂ ತೆಗೆಸಿಟ್ಕಂಡಂಗಾತು ನೋಡ್ರಿ!

ರಾಜ್ ಗೆ ಎಲ್ಲವರೆ ಅಭಿಮಾನಿಗಳು? ಅವರನ್ನೆಂದೋ ಕನ್ನಡನಾಡು ಮರ್ತೇತೆ ಎಂದೆಲ್ಲಾ ಸ್ಯಾಡಿಸ್ಟ್ ಆಗಿ ಬರೆವ ಪತ್ರಿಕೆಯೊಂದು ಸೇರಿದ್ದ ಜನಸಂದಣಿ ನೋಡಿಯೇ ದಿಗಿಲುಬಿದ್ದು ಧ್ವನಿ ಬದಲಾಯಿಸಿ ನಿರ್ಲಜ್ಚನಾಗಿ ಗುಣಗಾನ ಶುರು ಹಚ್ಕೊಂಡಿದ್ದು ಕೂಡ ದಾಖಲಾರ್ಹ. ನಾಯಿ ಬೊಗಳಿದರೆ ದೇವಲೋಕ ಹಾಳೆ? ಆ ಮಾತು ಬಿಡಿ, ದೆನ್ ವಿ ಕಂ ಟು ದಿ ನೆಕ್ಸ್ಟ್ ಪಾಯಿಂಟು. ಸಕಲ ಸರ್ಕಾರಿ ಗೌರವ ಕೊಡ್ತೀನಿ ಅಂದ ಕುಮಾರಗೌಡ ರಾಜರ ಶವವನ್ನು ಅರಮನೆ ಬಯಲಿಗೆ ಕೊಂಡೊಯ್ಯಲಾಗದೆ ಪರದಾಡುತ್ತಾ ಅಲ್ಲಿಂದ ಕಂಠೀರವ ಸ್ಟೇಡಿಯಂಗೆ ಸಾಗಿಸಿದ್ರು. ಅಲ್ಲೂ ಸರಿಯಾದ ವ್ಯವಸ್ಥೆ ಇಲ್ಲದ್ದರಿಂದ ಅಭಿಮಾನಿಗಳ ಕೋಪಕ್ಕೆ ಅಂಗಿ ಹರ್ಕೋಂಡು ಓಡಿದ್ದು ಬಿಟ್ಟರೆ ರಾಜ್ ಸಂಪೂರ್ಣ ಕಾಕಿಗಳ ವಶವಾಗಿ ಹೋದ್ರು. ದರ್ಶನ ಪಡೆಯಲೆಂದೇ ಮಿಡ್ ನೈಟ್ ತನಕ ಜನ ನುಗ್ಗಿ ಬಂದಾಗ ‘ಕ್ಯೂ’ ನಲ್ಲಿ ಕಳಿಸುವ ಸಿಸ್ತಾಗಲಿ ಬ್ಯಾರಿಕೇಡ್ ವ್ಯವಸ್ಥೆಯನ್ನಾಗಲಿ ನಿಖರವಾಗಿ ಮಾಡದ ಫೋಲೀಸಪ್ಪಗಳು ಲಾಠಿ ಬೀಸ್ಕೊಂಡು ಬೆಳಕು ಹರಿಸಿದರು. ದೊಡ್ಡ ಮಂದಿಗಳಿಗೆ ಸಿಲಿಮಾದೋರ್ಗೆ ಮಾತ್ರ ರಾಜ್ ದರ್ಶನ ಸುಲಭವಾತು. ಶ್ರೀಸಾಮಾನ್ಯರಿಗೆ ದುರ್ಲಭ ಯಾವಾಗಾತೋ ಅಭಿಮಾನಿಗಳು ಕೆರಳಿ ಕೆಂಡವಾಗೋದ್ರು. ಮಾಜನತೆ ರಾಜ್ ಮೇಲಿರುವ ತಮ್ಮ ಅಸಲಿ ಹಕ್ಕನ್ನು ಪಡೆಯಲು ಬೀದಿಗಿಳಿದು ದಬಾವಣೆಗೆ ನಿಂತರು. ಎಷ್ಟೇ ಗದ್ದಲವಾದರೂ ಲಕ್ಷಗಟ್ಟಲೆ ಜನ ಹರಿದು ಬಂದ್ರೂ ಪೋಲೀಸಪ್ಪಗಳು ತಲೆಕೆಡಿಸಿಕೊಳ್ದೆ ಲಾಠಿ ಬೀಸುತ್ತಾ ಜಾಗರಣೆ ಮಾಡಿದರು. ಕುಟುಂಬಕ್ಕೆ ದರ್ಶನ ಸಿಗೋದು ಕಷ್ಟವಾದಾಗಲೂ ಅಧಿಕಾರಿಗಳು ಕಷ್ಟಪಡದೆ ಎ.ಸಿ. ರೂಮಲ್ಲೇ ಕುಂತರು. ಈಚ್ಗೆ ಬರ್ನಿಲ್ಲ. ಕಂಠೀರವ ಸ್ಟೇಡಿಯಂನಿಂದ ಹೊರಟ ಶವಯಾತ್ರೆಯಲ್ಲಿ ಅಭಿಮಾನಿಗಳ ಕೋಪದ ಕಟ್ಟೆ ಒಡೆಯಿತು. ಅಭಿಮಾನ ಹೀಗೆ ವ್ಯಕ್ತವಾಗಬೇಕೆಂಬ ಕರಾರಾದ್ರು ಎಲ್ಲೈತೆ? ಅಭಿಮಾನಿಗಳು ದುರಾಭಿಮಾನಿಗಳು ನಿರಾಭಿಮಾನಿಗಳು ಎಲ್ಲಾ ಟೋಟಲ್ಲಾಗಿ ಜಮಾಯಿಸಿ ಶವಯಾತ್ರೆ ದಂಡಯಾತ್ರೆ ಮಾಡಿ ಕುರುಕ್ಷೇತ್ರಾನೇ ಕಣ್ಣೆದುರು ತಂದಿಟ್ಟರು. ಕಂಠೀರವ ಸ್ಟುಡಿಯೋಕ್ಕೆ ಶವ ಎಂಟ್ರಿ ಕೂಡೋದ್ರೊಳ್ಗೆ ಏಳೆಂಟು ಹೆಣಗಳು ಬಿದ್ವು. ಫೋಲೀಸೂ ಲಿಸ್ಟ್‍ನಾಗೆ ಸೇರ್ಕೊಂಡ. ಕೈಕಾಲು ಮುರ್ಕೊಂಡವರೇಟೋ? ತಾಯಂದಿರು ಮಕ್ಕಳೂ ಏಟು ತಿಂದ್ರು! ಲಕ್ಷಾಂತರ ಜನ ಸೇರಿದ ಜಾಗದಲ್ಲಿ ಆಗಬಹುದಾದ ಅನಾಹುತ ತಪ್ಪಿಸಲೆಂದೇ
ನೇಮಿಸಿದ್ದ ಪೋಲೀಸಪ್ಪಗಳೇ ಜೀವ ಉಳಿಸಿಕೊಳ್ಳೋಕೆ ಪರದಾಡಿತು ನೋಡ್ರಿ. ಸಿ‌ಎಂ ನಂಥ ಸಿ‌ಎಂ ಕುಮಾರೆನೇ ಜೋಕೋಮಾರ್ನಾಗಿ ಸ್ಟುಡಿಯೋ ಒಳ್ಗೆ ಕಾಲಿಕ್ಕದೇ ರಾಜರ ಅಂತಿಮ ದರ್ಶನ ಪಡೆಯದೆ ಪ್ರಾಣಭೀತಿಯಿಂದ ಕಾರಲ್ಲಿ ಓಡಿಹೋದ ಮ್ಯಾಲೆ ಇನ್ನು ರಾಜರ ಕುಟುಂಬಕ್ಕೆ ಅಭಿಮಾನಿ ದ್ಯಾವರುಗಳಿಗೆಲ್ಲಿಯ ರಕ್ಷಣೆ? ಅದ್ಯಾವ ಬ್ಯೂಗಲ್ ಊದಿದ್ರೋ ಶೋಕ ತೋಪು ಹಾರಿಸಿದ್ರೋ ಪಥಸಂಚಲನ ಮಾಡಿ ರೆಸ್ಪೆಕ್ಟ್ ತೋರಿಸಿದ್ರೋ ಕುಮಾರಗೌಡನೇ ಬಲ್ಲ! ಅಸಲು ಮಂತ್ರಿಗಳೇ ನಾಪತ್ತೆ! ಪೋಲೀಸ್ ಅಧಿಕಾರಿಗಳೋ ತಲೆಮರೆಸ್ಕೊಂಡು ತಲೆ ಉಳಿಸ್ಕೊಂಡು ಖುಷಿನಾಗಿದ್ದರು ಕಣ್ರಿ. ಬಲಿಯಾದದ್ದು ಸಾಮಾನ್ಯ ಜನ. ಬಲಿಷ್ಟರು ಬಯಲಿಗೇ ಬರಲಿಲ್ಲ. ಈ ಸಂಪತ್ತಿಗೆ ರಾಜಣ್ಣನ ಅಂತ್ಯ ಸಂಸ್ಕಾರದ ಹೊಣೆ ಯಾಕೆ ಹೊರಬೇಕಿತ್ತು? ಕೈಲಾಗದ ರಣಹೇಡಿ ಸರ್ಕಾರ ಹೆಣ ಹೊರೋಕೂ ನಾಲಾಯಕ್ಕು ಅಂಬೋದ್ನ ಸಾಬೀತು ಮಾಡಿದ್ದು ಹಿಂಗೆ. ಹಿಂಗಾದ್ರೆ ಮುಂದೆ ಹೆಂಗೆ?
*****
(ದಿ. ೧೧-೦೫-೨೦೦೬)