ದಟ್ಟ ನಗರದ ಈ
ಸ್ಪಷ್ಟ ಏಕಾಂತದಲ್ಲಿ
ಈ ಹೋಟೆಲಿನ ಈ
ಮೂಲೆಯಲ್ಲಿ
ಈ ಟೇಬಲಿನ ಈ
ಎರಡು ಪಕ್ಕಗಳಲ್ಲಿ

ಕೂತಿರುವ ನಾವು
ಈಗ ಯೋಚಿಸುತ್ತಿರುವುದು ಏನು ಪ್ರಿಯೆ ?
ಅದು ಜಾಫ್ನಾ ಅಲ್ಲ
ನಾಳಿನ ಭಾರತದ
ಸ್ವಪ್ನವೂ ಅಲ್ಲ
ಅದು ಶ್ರೀಲಂಕಾ ಅಲ್ಲ
ಅದು ಗೋಯಂಕಾ ಅಲ್ಲ
ಅಲ್ಲ ಅದು ತೆಲಂಗಾಣ

ಹಾಲೀ
ನಾವು ಮಾಡಿದ್ದೇವೆ ನಮ್ಮ ಮನಸುಗಳನ್ನು
ಖಾಲಿ
ನಾನಂತೂ
ಇದ್ದೇನೆ ಮೌನದಲ್ಲಿ

ಮೌನವ ಕೊಡು ಮೌನವ ತಕೊ
ನಾನಿರುತ್ತೇನೆ ಹೀಗೇ
ಈ ಚಹಾ ತಟ್ಟೆಯ ಎದುರು
ಹಗಲುಗಳೆದ್ದು ಮುಳುಗುವ ಈ ಸಿಟಿಯ
ಕಾಂಪ್ಲೆಕ್ಸಿಟಿಯ
ಆಳ
ಆಳ
ಆಳದಲ್ಲಿ

ನನ್ನ ಹೆಸರಿದೆ ಗಳತಿ.
*****