ಅಗ್ನಾಯಿ ! ಇನ್ನು ಆಲಿಂಗಿಸೆನ್ನ
ಓ ಜಾತವೇದಜಾಯೆ
ಗಂಧ-ಪಕಳೆಗಳು ಎಂದೊ ಉರುಳಿದವು
ಕೊಂಬೆ ಕಾಮಮಾಯೆ
ತೆಕ್ಕೆಯಲ್ಲಿ ಮುತ್ತೆನ್ನ ಜೀವನವ
ಜ್ಯೋತಿಲಲಿತೆ ನಲ್ಲೆ !
ಬಯಕೆ ಸುಟ್ಟೆ ಆ ದುಗುಡ ಬಿಟ್ಟೆ ಹಿ-
ಗ್ಗನ್ನು ತಾಳಬಲ್ಲೆ
ಮೋದಮೂರ್ತಿ ! ಪುಲಕಿಸುತ ಬಾರ ಆ-
ನಂದದೇಕ ಪ್ರತಿಮೆ
ಮೊಗದ ಬೆಡಗಿನಲಿ ನಾಟಿ ಹೀರುವೆನು
ಮುತ್ತಿನೊಂದೆ ಮಹಿಮೆ
ದಿವ್ಯಧ್ವನಿಯೆ ಹೃದಯದಲೆ ನುಡಿಸು ಆ-
ನಂದದೇಕ ತೂರ್ಯ
ಮುದ್ರೆ ಹಾಕು ತವ ತೇಜ ನೆಲಿಸು ಓ
ಪ್ರಾಣಪೂರ್ಣ ಸೂರ್ಯ
*****