ಅಮ್ಮಿಯ ಗುಳಿಬಿದ್ದ ಕಣ್ಣುಗಳಲ್ಲಿ
ಮಿಂಚಿನ ವಿದ್ಯುತ್‌ ಹರಿದಾಟ
ಅವಳ ಸತ್ತ ಕೈಗಳಲ್ಲಿ ಜೀವ ಸಂಚಾರ
ಬಯಲು ಸೀಮೆಯ ರೊಟ್ಟಿಚಟ್ನಿ
ರುಚಿಕಂಡ ಶೇಖನೊಬ್ಬ ಬಂದ
ಕತ್ತಲೆ ರಾತ್ರಿಯಲ್ಲಿ
ಧರ್ಮ ದಲ್ಲಾಲರ ಎದುರಾಗಿಟ್ಟುಕೊಂಡು
ಮುಗಿಸಿಯೇ ಬಿಟ್ಟ ಒಪ್ಪಂದ
ಪುಟ್ಟ ಬಾಲೆಯೊಂದಿಗೆ ನಿಕಾಹ್!
ಮೂರು ತಿಂಗಳ ಬಳಿಕ
ಬಿರಬಿರನೆ ಹೊರನಡೆದ ಬರೆದಿಟ್ಟು
ತಲ್ಲಾಕಿನ ಮೂರು ಶಬ್ದಗಳ ಮೇಲೆ
ಹಸಿರು ಕಟ್ಟುಗಳ ಭಾರ ಹೇರಿ
ಅಮ್ಮಿಗೇನು ಗೊತ್ತು ಹೇಳು?
ನಾ ಹೊತ್ತಿರುವ ಅವನ ಬಸಿರು?
ಕನಸ ಕಟ್ಟೆಯ ಗೋರಿಯ ಮೇಲೆ
ಧರ್ಮದ ಚಾದರ ಹೊದ್ದು
ಬದುಕೆಲ್ಲ ತೊಳೆಯಬೇಕಿದೆ
ಅವನ ಹಾದರದ ಹೊಲಸು
ಮೇಲೆ ಧರ್ಮದ ಮುಸುಕು
ಅದು ಅಮ್ಮಿಗೇನು ಗೊತ್ತು?
ಹಸಿದ ಹೊಟ್ಟೆ ಚುರುಗುಟ್ಟಿದಾಗ
ಮಂಡೆ ಊರಿದಳಲ್ಲ ಅಮ್ಮಿ
ಅಸಹಾಯಕತೆಯ ಅಳಲಿನಲಿ
ಕರುಳ ಕುಡಿಯನ್ನೂ ಮರೆತವಳಲ್ಲ
ಬದುಕೆಲ್ಲ ನಾನು ಸಹಿಸಬೇಕಿದೆ
ಅಸಹಾಯಕತೆಯ ಈ ನೋವು
ಧರ್ಮದ ಮುಸುಕಿನೊಳಗೆಯೇ!
*****