ಕಚ್ಚುವ ಹಾವ ಹಿಡಿವುದಕ್ಕೆ ಗಾರುಡವ ಕಲಿಸಿದುದಿಲ್ಲ
ಕುತ್ತುವ ಹಸುವಿನ ಕೊಂಬ ಹಿಡಿಯ ಕಲಿಸಿದುದಿಲ್ಲ
ಇದು ನಿನಗೆ ದಿಂಡೆಯತನವೊ
ನಿರಂಗ ನಿಃಕಳಂಕ ಮಲ್ಲಿಕಾರ್ಜುನಾ
[ಗಾರುಡ-ಹಾವಿನ ವಿಷವನ್ನು ಇಲ್ಲವಾಗಿಸುವ ಗರುಡ ಮಂತ್ರ, ದಿಂಡೆ-ಬಂಡೆ, ಮರದ ಬೊಡ್ಡೆ, ರೂಕ್ಷತೆ, ತುಂಟತನ]
ಮೋಳಿಗೆ ಮಾರಯ್ಯನ ವಚನ. ಮನುಷ್ಯನನ್ನು ದೇವರೇ ಸೃಷ್ಟಿಮಾಡಿದ ಎಂದುಕೊಂಡರೆ ಅವನು ಏನೇನನ್ನೂ ಕಲಿಸದೆ ನಮ್ಮನ್ನೆಲ್ಲ ಸೃಷ್ಟಿಮಾಡಿ ಭೂಮಿಗೆ ಕಳುಹಿಸಿಬಿಟ್ಟಿದ್ದಾನೆ. ಕಚ್ಚಲು ಬರುವ ಹಾವನ್ನು ಪಳಗಿಸಲು ಗರುಡ ಮಂತ್ರ ಕಲಿಸಲಿಲ್ಲ, ತಿವಿಯಲು ಬರುವ ಹಸುವಿನ ಕೊಂಬು ಹಿಡಿದು ಬಗ್ಗಿಸಲು ಕಲಿಸಲಿಲ್ಲ. ಹೀಗೆ ಬದುಕಲು ಅಗತ್ಯವಾದ ವಿದ್ಯೆ ಕಲಿಸದೆ ಇದ್ದದ್ದು ದೇವರ ದಿಂಡಿಗತನವೋ? ದಿಣ್ಣೆ ಎಂಬ ಮಾತಿಗೆ ಬಂಡೆ, ಮರದ ಬೊಡ್ಡೆ ಅನ್ನುವ ಅರ್ಥಗಳಲ್ಲದೆ ರೂಕ್ಷತೆ, ತುಂಟತನ ಅನ್ನುವ ಅರ್ಥಗಳೂ ಇವೆ.
ಕೇಡಿನಿಂದ ಪಾರಾಗುವುದು, ಕೇಡನ್ನು ಪಳಗಿಸುವುದು ಇದೇ ನಾವು ಕಲಿಯಬೇಕಾದದ್ದು, ದೇವರು ನಮಗೆ ಕಲಿಸದೆ ಇರುವುದು! ದೇವರು ನಿರಂಗ, ಅಂಗವಿಲ್ಲದವನು. ಬಂಡೆಯಂತೆ ಇರುವವನು. ಅವನಿಗೆ ಒಳಿತು, ಕೆಡುಕು ಎರಡೂ ಇಲ್ಲ. ಕಲಿಸಬೇಕಾದುದನ್ನು ಕಲಿಸದೆ, ನೀವೇ ಕಲಿತುಕೊಳ್ಳಿ ಎಂದು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ತುಂಟನಂತೆ ಸುಮ್ಮನೆ ಇದ್ದಾನೆ!
*****