ಹಸ್ತಿನಾಪುರಕ್ಕೆ ಬಂದ ಪಾಂಡವರು

-ಮಕ್ಕಳ ಫಲಕ್ಕಾಗಿ ರಾಜ್ಯ ಕೋಶಗಳನ್ನು ತೊರೆದು ಹಿಮಾಲಯದ ತಪ್ಪಲಿಗೆ ತೆರಳಿದ್ದ ಹಸ್ತಿನಾಪುರದ ಅರಸನಾದ ಪಾಂಡುವು, ಕಳೆದುಕೊಂಡಿದ್ದನ್ನು ಮರಳಿ ಪಡೆಯಲು, ಸಿದ್ಧರಾದ ವೈದ್ಯರಿಂದ ಚಿಕಿತ್ಸೆಯನ್ನು ಪಡೆದುಕೊಂಡು, ಅವರು ತಿಳಿಸಿದ್ದ ಎಚ್ಚರಿಕೆಯ ನುಡಿಗಳನ್ನು ನಿರ್ಲಕ್ಷಿಸಿ, ಚಿಕಿತ್ಸೆಯು ಪೂರ್ಣ ಫಲಿಸುವ ಮೊದಲೇ ಆತುರಪಟ್ಟು ತನ್ನ ಕಿರಿಯ ಹೆಂಡತಿಯಾದ ಮಾದ್ರಿಯ ಸಂಗ ಮಾಡಿ ಅಕಾಲಮೃತ್ಯುವಿಗೆ ತುತ್ತಾದ. ಮಾದ್ರಿಯು ಇದನ್ನು ಕಂಡು ಅಯ್ಯೋ..! ಎಂದು ಚೀರಲು, ಕುಂತಿಯು ಮಕ್ಕಳೊಂದಿಗೆ ಅಲ್ಲಿಗೆ ಓಡಿಬಂದಳು. ಮಾದ್ರಿಯು ತನ್ನ ಗಂಡನ ಸಾವಿಗೆ ಕಾರಣನಾದೆನೆಂದು ಅಪಾರವಾಗಿ ದುಃಖಿಸಿ, ಗೋಳಾಡಿದಳು-

ವಸಂತಮಾಸದ ಸುಂದರ ದಿನದಲ್ಲಿ ಪಾಂಡುವು ಮಾದ್ರಿಯ ಜೊತೆಯಲ್ಲಿ
ಅಸಂತೃಪ್ತಿಯಿಂದಿದ್ದ ಅವನ ಮನ ತೃಪ್ತಿಯನ್ನರಸಿ ನಗು ಚೆಲ್ಲಿ
ನಡುಮಧ್ಯಾಹ್ನದ ಮಾದ್ರಿಯ ಸಂಗವ ಮಾಡಿದವನಂದು ಮರಣಿಸಿದ
ಮಡದಿ ಮಕ್ಕಳನ್ನೆಲ್ಲರ ತೊರೆಯುತ ಕಾಣದ ಲೋಕಕೆ ಪಯಣಿಸಿದ!
ಮಾದ್ರಿಯು ‘ಅಯ್ಯೋ..!’ ಎನ್ನುತ ಚೀರಿ ಅಳಲುತೊಡಗಿದಳು ಜೋರಾಗಿ
ಗಂಡನ ಸಾವಿಗೆ ಕಾರಣನಾದೆನು ಎನ್ನುವ ಚಿಂತೆಗೆ ಒಳಗಾಗಿ
ಮಾದ್ರಿಯು ಚೀರಿದ ದನಿಯನು ಕೇಳಿದ ಕುಂತಿಯು ಬಂದಳು ಓಡೋಡಿ
ಮಕ್ಕಳು ಐವರು ಹಿಂದೆಯೆ ಬಂದರು ತಾಯಿಯು ಓಡುವುದನು ನೋಡಿ
ಪಾಂಡು-ಮಾದ್ರಿಯರ ಒಟ್ಟಿಗೆ ನೋಡಿದ ಕುಂತಿಗೆ ಕಾರಣ ತಿಳಿದಿತ್ತು
ನಡೆದುದೆಲ್ಲವನು ಅರಿತಳು, ಕುಂತಿಯ ದುಃಖದ ಕಟ್ಟೆಯು ಒಡೆದಿತ್ತು!

ಅಯ್ಯೋ! ವಿಧಿಯೇ ಅಗಲಿಸಿಬಿಟ್ಟೆಯಾ? ಅನುರಾಗದ ಈ ಜೋಡಿಯನು
ಅಯ್ಯೋ! ವಿಧಿಯೇ ವಂಚಿಸಿಬಿಟ್ಟೆಯಾ? ನಿನ್ನಾಟವನಾಡಿದೆಯೇನು?
ತೀರದ ಬಯಕೆಯ ತೂರಿಸಿ ಎದೆಯಲಿ ತೋರಿಸಿ ಕಾಮನಬಿಲ್ಲನ್ನು
ಕಾಣದ ಲೋಕಕೆ ಕಳುಹಿಸಿಬಿಟ್ಟೆಯಾ? ಬದುಕಲಿ ಉಳಿದಿದೆ ಏನಿನ್ನು?

ಮಕ್ಕಳೈವರೂ ತಾಯಿಯರೊಂದಿಗೆ ಅಳತೊಡಗಿದ್ದರು ದುಃಖದಲಿ
ಹತ್ತಿರದಾಶ್ರಮವಾಸಿಗಳೆಲ್ಲರು ಬಂದರು ಮುಂದಿನ ನಿಮಿಷದಲಿ
ಕುಂತಿ ಮಾದ್ರಿಯರ ಸಂತೈಸುತ್ತಲಿ ಮಕ್ಕಳನ್ನು ಆದರಿಸಿದರು
ದುಃಖದ ಮಡುವಲಿ ಮುಳುಗಿದ ಮಂದಿಯು ಮುಂದಿನ ಕಾರ್ಯದಿ ತೊಡಗಿದರು!
ಮಾದ್ರಿಯು ಮನದಲಿ ಚೀರಿಡುತಿದ್ದಳು ಗಂಡನ ಕೊಂದುದು ತಾನೆಂದು
ಮನದಲಿ ಮರುಗುತ ಕೊರಗುತಲಿದ್ದಳು ಏತಕೆ ದುಡುಕಿದೆ ತಾನಿಂದು?
ಆತುರಪಟ್ಟು ಅನಾಹುತವಾಯಿತು, ಅಯ್ಯೋ! ಇದಕ್ಕೆ ಕ್ಷಮೆಯಿಲ್ಲ
ತಪ್ಪು ಮಾಡಿದೆನು ಶಿಕ್ಷೆಯಾಗದೆ ನನ್ನ ಮನಸ್ಸಿಗೆ ಹಿತವಿಲ್ಲ
ಗಂಡನ ಸಾವಿಗೆ ಕಾರಣಳಾದೆನು ಪಾಪದ ಭೀತಿಯು ಎದೆಯಲ್ಲಿ
ತನಗಿನ್ನೇನೂ ಉಳಿದಿಲ್ಲೆನ್ನುತ ಮುಂದಿನ ಬದುಕಿನ ಹಾದಿಯಲಿ
ಪತಿಯೊಂದಿಗೆ ಸಹಗಮನವ ಮಾಡಲು ಮನದಲ್ಲಿಯೇ ನಿಶ್ಚಯಿಸಿದಳು
ಚಿತೆಯನು ಏರುತ ಪತಿಯನು ಸೇರಲು ದೃಢಮನದಲಿ ನಿರ್ಧರಿಸಿದಳು!

ಮಾದ್ರಿಯು ಅಳುತಲಿ ಕುಂತಿಗೆ ನುಡಿದಳು- “ಅಕ್ಕಾ, ಮನ್ನಿಸು ತಪ್ಪನ್ನು
ಇನಿಯನ ಬಯಕೆಯು, ನನ್ನಯ ಸ್ವಾರ್ಥವು ಕೆಡಿಸಿತು, ಬೀಳ್ಕೊಡು ನನ್ನನ್ನು
ಪತಿಯೊಂದಿಗೆ ಚಿತೆಯೇರುತ ಈ ದಿನ ಅವನೊಂದಿಗೆ ನಾ ಹೋಗುವೆನು
ಪತಿತೆ ನಾನು ಪತಿ ಪಾದವ ಸೇರುತ ಪತಿಯ ದಾಸಿ ನಾನಾಗುವೆನು”
ಕುಂತಿಯು ನುಡಿದಳು- “ತಂಗಿಯೆ, ನಾನೇ ಮೊದಲು ಬಂದವಳು ಸತಿಯಾಗಿ
ಇಹಪರದಲ್ಲೂ ನಾನೇ ಮೊದಲಿಗೆ, ನಡೆವೆ ಗಂಡನಿಗೆ ಜೊತೆಯಾಗಿ
ಮಕ್ಕಳ ನೋಡಿಕೊ, ಅಕ್ಕರೆ ತುಂಬಿದ ತಾಯಿಯಾಗು ಅವರೆಲ್ಲರಿಗೆ
ಮಕ್ಕಳ ಕಷ್ಟವನೆಲ್ಲವ ನೀಗಿಸಿ ಕಾಯಬೇಕು ನೀ ಕಡೆವರೆಗೆ”
ಮಾದ್ರಿಯು ಅಂದಳು- “ಮಕ್ಕಳ ಸಲುಹಲು ಅಕ್ಕಾ ನೀನೇ ತಕ್ಕವಳು
ತಾಳ್ಮೆಯ ಬಾಳ್ವೆಯ ಅರಿಯದ ನಾನೋ ನಿನಗಿಂತಲೂ ಬಲು ಚಿಕ್ಕವಳು
ನಿನ್ನ ಹಿಡಿತದಲ್ಲಿ ಬೆಳೆಯುವ ಮಕ್ಕಳು ಜಗದಲಿ ಉತ್ತಮರಾಗುವರು
ನಿನ್ನಂತಹ ತಾಯಿಯು ಜೊತೆಗಿದ್ದರೆ ಉತ್ತಮ ವ್ಯಕ್ತಿಗಳಾಗುವರು
ಇನಿಯನ ಸಾವಿಗೆ ಕಾರಣಳಾದೆನು ನಾನೇ ಹೋಗುವೆ ಅವನೊಡನೆ
ಸಹಗಮನಕೆ ಅನುಮತಿ ನೀಡೀಗಲೆ ಸಾಗುವೆ ನಾನೂ ಪತಿಯೊಡನೆ
ಸತ್ಯದ ಪಥದಲಿ ಮಕ್ಕಳ ನಡೆಸುವೆ ನನಗಿಂತಲೂ ನೀ ಬಲು ಜಾಣೆ
ತಡೆಯದೆ ನನ್ನನು ಕಳುಹಿಸಿಕೊಡು, ನೀ ತಡೆದರೆ ನಮ್ಮಿ ಪತಿಯಾಣೆ”
ಮಾದ್ರಿಯ ಮಾತಿಗೆ ಕುಂತೀಮಾತೆಯು ಮೌನದ ಸಮ್ಮತಿ ನೀಡಿದಳು
ಪಾಂಡವರೈವರ ಜವಾಬ್ದಾರಿಯನು ಹೊರುವೆನು ಎನ್ನುತ ಹೇಳಿದಳು!
ಮಾದ್ರಿಯು ಅಕ್ಕನ ಆಶೀರ್ವಾದವ ಪಡೆಯುತ ಎಲ್ಲರ ನಮಿಸಿದಳು
ಹೋಗುವೆನೆನ್ನುತ ಹೇಳಿ ಮಕ್ಕಳಿಗೆ ಸಾವಿನಮನೆಯನು ತಲುಪಿದಳು
ಮಾದ್ರಿಯು ಮಡಿದಳು ಪಾಂಡುವಿನೊಂದಿಗೆ ಉರಿಯುವ ಬೆಂಕಿಯ ಚಿತೆಯೇರಿ
ಮಾಡಿದ ತಪ್ಪಿಗೆ ಶಿಕ್ಷೆಯು ಎನ್ನುತ ತನ್ನಯ ಗಂಡನ ಜೊತೆ ಸೇರಿ
ಕುಂತಿಯು ಉಳಿದಳು ಐವರು ಮಕ್ಕಳ ಪಾಲಿಗೆ ಮಮತೆಯ ತಾಯಾಗಿ
ಮುಂದಿನ ಮುಳ್ಳಿನ ಹಾದಿಯ ಸವೆಸಲು ಮಾರ್ಗದರ್ಶಕಳು ತಾನಾಗಿ
ಆಶ್ರಮದಲ್ಲಿನ ಹಿರಿಯ ಮುಖಂಡರು ಕುಂತಿಯ ಸಂಗಡ ಮಾತಾಡಿ
ಅವರನು ಹಸ್ತಿನಪುರದಾಶ್ರಯಕ್ಕೆ ಕಳಿಸುವ ಏರ್ಪಾಡನು ಮಾಡಿ
ಭೀಷ್ಮನ ಸಂಧಿಸಿ ವಿಷಯವ ಅರುಹಲು ಮೊದಲೇ ಶಿಷ್ಯರ ಕಳಿಸಿದರು
ನಾಲ್ವರು ಶಿಷ್ಯರು ನಡೆದುದನೆಲ್ಲವ ಭೀಷ್ಮನ ಸಂಗಡ ತಿಳಿಸಿದರು

ಕಾಡಿನಲಿ ಹುಟ್ಟಿ ಕಾಡಿನಲಿ ಬೆಳೆದು ನಾಡಿನಾ ಕರೆಗೆ ಓಗೊಟ್ಟು
ಕಾಡನು ತ್ಯಜಿಸುತ ಗೂಡನು ತೊರೆಯುತ ನಡೆದರು ನೆಮ್ಮದಿ ಬಲಿಗೊಟ್ಟು
ಕಾಡುಮೇಡುಗಳು ಕಲಿಸಿದ ಪಾಠವ ಕಡೆಯವರೆವಿಗೂ ನೆನಪಿಟ್ಟು
ನಾಡಿನಲ್ಲಿ ಸುಖ ಕಾಣಲು ಹೊರಟರು ಬೀಡುಬಿಡಲು ಎಲ್ಲಾ ಒಟ್ಟು!

ಕುಂತಿಯು ಐವರು ಮಕ್ಕಳ ಸಂಗಡ ಹೊರಟಳು ಹಸ್ತಿನಪುರದೆಡೆಗೆ
ಪಂಚಪಾಂಡವರು ಒಟ್ಟಿಗೆ ನಡೆದರು ಚಿಂತೆಯಿಂದ ತಾಯಿಯ ಜೊತೆಗೆ
ಭೀಷ್ಮನು ತನ್ನಯ ಪರಿವಾರದ ಜೊತೆ ಸ್ವಾಗತ ಕೋರಿದ ಎಲ್ಲರಿಗೆ
ಧೃತರಾಷ್ಟ್ರನು ಬಲುಚಿಂತೆಯ ಮಾಡಿದ ಧೂರ್ತ ಮನಸ್ಸಲಿ ಒಳಗೊಳಗೆ
ಕುಂತಿಯ ಸಂಗಡ `ಪಾಂಡುಕುಮಾರರು ಬಂದರು ಹಸ್ತಿನಪುರದೊಳಗೆ
ಧೃತರಾಷ್ಟ್ರನ ಸುತರೊಂದಿಗೆ ಬೆರೆಯುತ ಉಳಿದುಕೊಂಡರರಮನೆಯೊಳಗೆ
ದುರ್ಯೋಧನ ದುಶ್ಯಾಸನರೊಟ್ಟಿಗೆ ನೂರ ಒಂದು ಮಂದಿಯ ಜೊತೆಗೆ
ಬಾಲ್ಯಸಹಜ ಜಗಳಾಟಗಳಾಡುತ ನಲಿಯುತಲಿದ್ದರು ಪ್ರತಿಘಳಿಗೆ!
ಭೀಮನು ಚಿಕ್ಕವನಾದರೂ ದೇಹದ ಗಾತ್ರದಲ್ಲಿ ಬಲು ದೊಡ್ಡವನು
ಬರಿಗೈಯಲ್ಲಿಯೆ ಬಡಿದಾಡುವನವ, ಕದಲಿಸಬಲ್ಲನು ಗುಡ್ಡವನ್ನು
ಮದಿಸಿದ ಆನೆಯ ತೆರದಲಿ ನಡೆಯುತ ಹೊಟ್ಟೆಯಕಿಚ್ಚನು ಬರಿಸುವನು
ಬಗೆಬಗೆ ವ್ಯಾಯಾಮವ ಮಾಡುತ್ತಲಿ ಬೆವರಿನ ಹೊಳೆಯನು ಹರಿಸುವನು
ಮಲ್ಲವಿದ್ಯೆಗಳ ಕಲಿಯುತ ಭೀಮನು ಹೆಮ್ಮೆಯ ಮನದಲ್ಲಿ ಬೀಗುವನು
ಹತ್ತು ಮಂದಿ ತಿನ್ನುವ ಆಹಾರವ ಒಬ್ಬನೇ ತಿಂದು ತೇಗುವನು
ಎಲ್ಲರವನನ್ನು ಕರೆಯುತ್ತಿದ್ದರು ತಿಂಡಿಪೋತ ಭೀಮನು ಎಂದು
ಕುಂತೀಮಾತೆಯು ಕರೆಯುತ್ತಿದ್ದುದು ಭೀಮಸೇನ ಅತಿಬಲನೆಂದು
ಭೀಮ ತಿನ್ನುವುದು ಹೆಚ್ಚೇ ಆದರೂ ಸೋಲೇ ಇಲ್ಲದ ಸರದಾರ
ಸಾಹಸದಲಿ ಸರಿಸಮರಾರಿಲ್ಲದ ವೀರಾಗ್ರೇಸರ ರಣಧೀರ!

ದುರ್ಯೋಧನನವ ಧೀರನಾದರೂ ಹೊಟ್ಟೆಕಿಚ್ಚು ಹೆಚ್ಚಿದ್ದವನು
ಹೆಚ್ಚಿನವನು ತಾನೆನ್ನುವ ಭಾವದ ಸ್ವಾಭಿಮಾನಿ, ಕೆಚ್ಚಿದ್ದವನು
ಸೋದರಮಾವನು ಶಕುನಿಯ ಮಾತುಗಳೆಂದರೆ ಅವನಿಗೆ ಬಲು ಇಷ್ಟ
ಯಾರೇ ಆಗಲಿ ಶಕುನಿಯಾಟವನು ಅರಿತುಕೊಳ್ಳುವುದು ಬಲು ಕಷ್ಟ

ತಂಗಿಯ ಮದುವೆಯ ನೋಡಲು ಬಂದವ ಹಿಂದಕೆ ಮರಳದೆ ಉಳಿದಿದ್ದ
ಮಾತಿನ ಮಲ್ಲನು, ಕೌರವರೊಂದಿಗೆ ಗಾಢ ಗೆಳೆತನವ ಬೆಳೆಸಿದ್ದ
ಧೃತರಾಷ್ಟ್ರನ ಪರಿವಾರದ ಬಲದಲಿ ಬಲುವಿಶ್ವಾಸವ ಗಳಿಸಿದ್
ದುರ್ಯೋಧನನನು ಮುಂದಿನ ರಾಜನ ಮಾಡುವೆನೆನ್ನುತ ತಿಳಿಸಿದ್ದ
ತಂಗಿಯ ಮಕ್ಕಳ ಏಳಿಗೆಗೋಸ್ಕರ ತಾನೂ ಕಂಕಣ ಕಟ್ಟಿದ್ದ
ವಾಮಮಾರ್ಗಗಳ ಅನುಸರಿಸುತ್ತಲಿ ಉಚಿತ ಸಲಹೆಗಳ ಕೊಟ್ಟಿದ್ದ
ಪಾಂಡವರೈವರ ವೀರಪರಾಕ್ರಮ ಕಂಡು ಅಸೂಯೆಯ ಪಟ್ಟಿದ್ದ
ಪಾಂಡವ-ಕೌರವರಿಬ್ಬರ ನಡುವಲಿ ದ್ವೇಷದ ಬೀಜವ ಬಿತ್ತಿದ್ದ!

ದಾಯಾದಿಗಳಲಿ ಮತ್ಸರವಾಯಿತು ಮಾಯೆಯು ತುಂಬಿದ ಲೋಕದಲಿ
ಮಾಯಾಮೋಡಿಯ ಬಲ್ಲವರಿಂದಲಿ ಗಾಯವು ಮೂಡಿತು ಮನಸಿನಲಿ
ಆಯಗಾರರಿಗೆ ಆಡುಂಬೊಲವೇ ಆಯಿತು ಅರಮನೆಯಂಗಳವು
ನ್ಯಾಯ ನೀತಿಗಳು ದಾರಿತಪ್ಪಿದವು ಅಯ್ಯೋ! ಇನ್ನು ಅಮಂಗಳವು!

ಹತ್ತು ಮಂದಿಯನ್ನು ಮಣ್ಣು ಮುಕ್ಕಿಸುವ ಸಾಹಸಭೀಮನ ಬಲವನ್ನು
ಕಂಡು ಕೌರವರು ಮತ್ಸರದಿಂದಲಿ ದ್ವೇಷಿಸುತ್ತಿದ್ದರು ಅವನನ್ನು
ದುರ್ಯೋಧನನಿಗೆ ಭೀಮನ ಕಂಡರೆ ಕೊನೆಯೇ ಇಲ್ಲದ ಆಕ್ರೋಶ
ಭೀಮನಿಗೂ ದುರ್ಯೋಧನನೆಂದರೆ ಸಹಿಸಲು ಆಗದ ಆವೇಶ
ಭೀಮನೊಳಿದ್ದಿತು ಅತಿವಿಶ್ವಾಸವು ಶಕ್ತಿವಂತ ತಾನೇ ಎಂದು
ಕೌರವರೆಲ್ಲರು ಚಿಂತಿಸುತಿದ್ದರು ಇವನ ನಿವಾರಣೆ ಹೇಗೆಂದು!
ಹೀಗೆಯೇ ಇಲ್ಲಿ ಪಂಚಪಾಂಡವರ ಬೆಳೆಯಲು ಬಿಟ್ಟರೆ ಕೇಡೆಂದು
ಭೀಮನ ಮೊದಲಿಗೆ ಗುರಿಯಾಗಿಸುತಲಿ ಹೂಡಿದರೊಂದಿನ ಸಂಚೊಂದು!
ಭೀಮನೊಮ್ಮೆ ಸಿಹಿನಿದ್ದೆಯೊಳಿದ್ದನು, ಬಿಗಿದರು ಅವನನು ಬಳ್ಳಿಯಲಿ
ಹೊತ್ತು ನಡೆದವರು ಎಸೆದೇಬಿಟ್ಟರು ಉಕ್ಕಿ ಹರಿಯುತಿಹ ಹೊಳೆಯಲ್ಲಿ
ನಿದ್ದೆಯಲಿದ್ದವ ನೀರಲಿ ಬಿದ್ದವ ಎಚ್ಚರಗೊಂಡನು ಕ್ಷಣದಲ್ಲಿ
ನಡೆದುದೆಲ್ಲವನು ಅರಿತನು ಕೂಡಲೆ ನೀರೊಳಗಿದ್ದೇ ನಿಮಿಷದಲಿ
ಬಿಗಿದ ಬಳ್ಳಿಗಳು ಅವನಿಗೆ ಲೆಕ್ಕವೆ? ಪಟಪಟ ಹರಿದವು ತುಂಡಾಗಿ
ಹೂಂಕರಿಸಿದ್ದನು ಮೇಲೆ ಚಿಮ್ಮಿದನು, ನೀರಲಿ ದೇಹವು ಬೆಂಡಾಗಿ
ಭೀಮನು ಕಟ್ಟನು ಬಿಡಿಸಿಕೊಂಡವನು ನೀರಿನಿಂದ ಹೊರಗಡೆ ಬಂದು
ಹಲವು ಮಂದಿಯನ್ನು ಒಟ್ಟಿಗೆ ಹಿಡಿದೆಳೆದಾಡಿದ ದರದರದರನೆಂದು
ಮೈಕೈಯೆಲ್ಲವ ತರಚಿಕೊಂಡವರು ಎದ್ದು ಬಿದ್ದು ಎದ್ದೋಡಿದರು
ಹಿರಿಯನಾದ ದುರ್ಯೋಧನನಲ್ಲಿ ನೂರು ದೂರುಗಳ ನೀಡಿದರು!

ಮತ್ತೆ ಒಮ್ಮೆ ಮರಕೋತಿಯಾಟವನ್ನು ಆಡತೊಡಗಿದ್ದ ಸಮಯದಲಿ
ಕೌರವರೆಲ್ಲರು ಮರವನ್ನೇರುತ ಕುಳಿತಿರೆ ಅಲ್ಲಿನ ಕೊಂಬೆಯಲಿ
ಭೀಮನು ಮರವನ್ನು ಅಲುಗಿಸಿಬಿಟ್ಟನು ಒಂದೇ ಬಾರಿಗೆ ಜೋರಾಗಿ
ಅವರುಗಳೆಲ್ಲರು ತಪತಪ ತಪತಪ ಉರುಳಿದ್ದರು ಹೈರಾಣಾಗಿ!
ಕೌರವರೆಲ್ಲರು ಒಂದುಗೂಡಿ ಬಲಭೀಮನ ಮುಗಿಸಲು ಬಯಸಿದರು
ತಿಂಡಿಪೋತ ಬಲಭೀಮನ ಕೊಲ್ಲಲು ವಿಷದ ಲಡ್ಡುಗೆಯ ಉಣಿಸಿದರು
ಭೀಮನು ತಿಂದನು ಜೀರ್ಣಿಸಿಕೊಂಡನು ತೇಗುತ ಅವರನು ಹಂಗಿಸಿದ
ಏನು ಮಾಡಿದರೂ ಭೀಮನು ಸೋಲದೆ ಎಲ್ಲವನವರಿಗೆ ತಿರುಗಿಸಿದ!

ಅಂತೂ ಮಕ್ಕಳ ಎಳೆಮನಸುಗಳಲಿ ವೈರವು ಬೆಳೆಯುತ ಸಾಗಿತ್ತು
ಎಂತೋ ಏನೋ ಇತ್ತಂಡಗಳಲಿ ದ್ವೇಷದ ಬೀಜವು ಮೊಳೆತಿತ್ತು
ನೂರು ಮಂದಿಯೂ ಒಂದೆಡೆಯಾದರು, ಅವರು ಕೌರವರು ಎನಿಸಿದರು
ಐದು ಮಂದಿ ಇನ್ನೊಂದೆಡೆಯಾದರು ಪಂಚಪಾಂಡವರೆನಿಸಿದರವರು
ಕೌರವರಲಿ ಬಲು ಈರ್ಷೆಯು ಬೆಳೆಯಿತು ಮನಸಿನಲ್ಲಿ ಅಸಹಿಷ್ಣುತೆಯು
ಪಾಂಡವರೆಲ್ಲರು ಸಮಾಧಾನಿಗಳು ಅವರಲ್ಲಿ ಇತ್ತು ಸಹಿಷ್ಣುತೆಯು
ಕೌರವ-ಪಾಂಡವರಿಬ್ಬರಲ್ಲಿಯೂ ಒಳಗೊಳಗೇ ಹಬೆಯೇರಿತ್ತು
ಕಾರಣ ಹುಡುಕುತ ಕೆಣಕುತಲಿದ್ದರು ರೋಷಾವೇಶವು ಏರಿತ್ತು
ಒಳಿತನು ಮಾಡದ ಅನಾರೋಗ್ಯಕರ ಸ್ಪರ್ಧೆಯು ಅವರಲಿ ಬೆಳೆದಿತ್ತು
ಒಂದೇ ಎನ್ನುವ ಭಾವನೆ ಅಳಿಯುತ ಬೇರೆ ಎಂಬುವುದು ಉಳಿದಿತ್ತು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆತ್ಮ ಮಿಲನ
Next post ವಚನ ವಿಚಾರ – ಯಾಕೆ ಇದನ್ನೆಲ್ಲ ಕಲಿಸಲಿಲ್ಲ?

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

cheap jordans|wholesale air max|wholesale jordans|wholesale jewelry|wholesale jerseys