ಯೌವ್ವನವೇ ಮತ್ತೊಮ್ಮೆ ಹುಟ್ಟಿ ಬಾ
ಚೈತನ್ಯಧಾರೆಯಾಗಿ ಮರಳಿ ಬಾ
ಮುಪ್ಪಾದ ಈ ಜೀವ
ಉರುಳಿ ಹೋಗುವ ಮುನ್ನ
ಜೀವನದಿಯಾಗಿ ಹರಿದು ಬಾ.
ಕಾಲಚಕ್ರದ ಗಾಲಿ
ಹಿಂದಕ್ಕೆ ತಿರುಗಲಿ
ಗತಜೀವನದ ಕಥೆಯ
ಪುಟಗಳು ತೆರೆಯಲಿ
ಹಿಂದೆ ಕೇಳಿದ ಹಾಡು
ಮತ್ತೊಮ್ಮೆ ಧ್ವನಿಸಲಿ
ಅಳಿದು ಹೋದವರೆಲ್ಲಾ
ಜೀವ ತಳೆದು ನಿಲ್ಲಲಿ||
ಒಂದೊಂದು ಕ್ಷಣವನ್ನು
ಆನಂದದೆ ಕಳೆಯುವೆನು
ಪ್ರೀತಿ ಸ್ನೇಹದ ಸುಧೆಯ
ಸಮನಾಗಿ ಉಣಿಸುವೆನು
ಮೋಹ ಸ್ವಾರ್ಥವ ಬಿಟ್ಟು
ಸಂತನಂತೆ ದುಡಿಯುವೆನು
ವಿಶ್ವಮಾನವ ಜ್ಯೋತಿ
ಎಲ್ಲರೆದೆಗೆ ಹಚ್ಚುವೆನು.
ತಪ್ಪುಗಳ ಅರ್ಥೈಸಿ
ಒಪ್ಪಾಗಿ ನಡೆಯುವೆನು
ಅರಿಷಡ್ವರ್ಗಗಳ ಮೆಟ್ಟಿ
ನಾ ನಿಲ್ಲುವೆನು.
ಹರಿಹರರು ಮೆಚ್ಚುವಂತೆ
ಹಸನಾಗಿ ಬಾಳುವೆನು
ಸಾರ್ಥಕ ಜೀವನ ನಡೆಸಿ
ಧನ್ಯ ಧನ್ಯನಾಗುವೆನು.
*****



















