ಹರಿದ ಸೀರೆಯಲಿ ನೂರೆಂಟು
ತೇಪೆಯ ಚಿತ್ತಾರ
ಅರಿಶಿನದ ಓಕುಳಿ ಕೆನ್ನೆಗೆ
ಹಣೆಯಲಿ ಕಾಸಿನಗಲದ
ಕುಂಕುಮದ ಸಿಂಗಾರ
ಮುಡಿಯಲ್ಲಿ ಮಾಸದ ಹೂವಿನ ದಂಡೆ
ಮುಗ್ಧ ಮಗುವಿನ ಮೊಗ
ಅಲ್ಲಿ ನಗುವೆಂಬ ನಗ
ಕಂಗಳಲ್ಲಿ ಬತ್ತದ ವಾತ್ಸಲ್ಯದ ಒರತೆ
ಆಧುನಿಕ ಗಂಧಗಾಳಿಯ ಕೊರತೆ
ಕಡಲಿಗೂ ಸಮನಾಗದ
ಮಮತೆಯ ಬಿಂದು
ಆಗಸದ ಪಾತ್ರಕ್ಕೂ ಹಿರಿದು
ಕಾರುಣ್ಯಸಿಂಧು
ಮಾತಿನಲಿ ಕುಗ್ಗದ ಅಗಾಧ ಪ್ರೀತಿ
ಮರುಳಾಗಿಸಿ ಮಣಿಸುವ ಮಾಂತ್ರಿಕ ಶಕ್ತಿ
ಮುಚ್ಚುಮರೆಯಿಲ್ಲದ ಬಿಚ್ಚುನುಡಿ
ಕಪಟ ಮೋಸವರಿಯದ ಶುದ್ಧ ಕನ್ನಡಿ
ಗಂಧದ ಮರ ಬೇಕಿಲ್ಲ ಉಪಮೆಗೆ
ಕರ್ಪೂರದಾರತಿ ಕಾಂತಿ ಕಂಗಳೊಳಗೆ
ನಿನ್ನೆ ನಾಳೆಗಳ ಚಿಂತೆ ತೊರೆದು
ಬೇಕು ಬೇಡಗಳ ಪಟ್ಟಿ ಕಿತ್ತೆಸೆದು
ಉರಿವ ಒಲೆಯೊಳಗೆ ಕನಸು,
ಕಲ್ಪನೆಗಳ ಸುಟ್ಟ ಬೂದಿ.
ವಾಸ್ತವತೆಯ ಪರಿಧಿಯಲ್ಲಿ
ಗರಗರ ತಿರುಗುವ ಗಾಣದೆತ್ತು
ಅಪ್ಪ ಹಾಕಿದ ಲಕ್ಷ್ಮಣ ರೇಖೆ
ಮೀರಿ ದಾಟಿದ ಭಯಭಕ್ತಿ
ತುತ್ತು ಅನ್ನ ಹಿಡಿಯಷ್ಟು ಪ್ರೀತಿ
ಪಂಚಾಮೃತವೆನ್ನುವ ಪರಮ ತೃಪ್ತಿ
ನೂರು ದೇವರ ನಿವಾಳಿಸಿ
ಒಗೆಯಬೇಕಿವಳ ಮುಂದೆ
ಕರುಳು ಬತ್ತಿಯ ನೇದು
ನೆತ್ತರ ತೈಲವನೆರೆದು
ಒಡಲ ಕುಡಿಗಳ ಬೆಳಗುವ
ನಿತ್ಯ ಉರಿಯುವ ನಂದಾದೀಪ
*****



















