ಹೂವು ಅರಳಿದ ಮರದ ಕೆಳಗೆ
ಕುಳಿತ ಅವಳು ಕನಸಿನ ಅರಮನೆಯ
ರಾಜಕುಮಾರಿಯಂತೆ ಮಗಳ ತಬ್ಬಿ
ಎದೆಗಪ್ಪಿಕೊಂಡಿದ್ದಾಳೆ. ಆಕಾಶದಲ್ಲಿ ಒಂಟಿ
ಹದ್ದು ಹಾರಾಡುತ್ತಿದೆ ಆ ಮಟಮಟ ಮಧ್ಯಾಹ್ನದಲಿ.
ನೆರಳ ನೆನಪುಗಳಲಿ ತಣ್ಣ ಮಣ್ಣಲಿ
ಸಡಗರದಲ್ಲಿ ಬೆಳಕು ಅರಳುತಿರಲು
ಯಾವುದೋ ನಿಶಾನೆಯ ಕಪ್ಪು ಮೋಡ ತೇಲಿ
ಮೈಯುಬ್ಬಿ ನಾಲ್ಕು ನಿಟ್ಟಿನ ಎಲ್ಲೆ ಕಟ್ಟು ಹರಿದು
ಬಯಕೆಗಳ ಮಂಗನಾಟ ಸಾರಿದೆ ಪಯಣ
ಏಕಾಂತದಲಿ.
ಹೊಲದುದ್ದಕ್ಕೂ ಹರಿದಾಡಿತ್ತು ನೇಗಿಲು ಮೊನೆ
ಬಸಿರೆಲ್ಲ ಬರಿದು ಬಸಿದು ಹೊರಚೆಲ್ಲಿತ್ತು ಜೀವದ ಸೊನೆ,
ಬೆದೆಯ ಕಾವಿಗೆ ಸಿಕ್ಕ ಹೂವಿನ ಒಡಲು ತುಂಬ
ನಾಗಸಂಪಿಗೆಯ ಕಾವು, ಒಂದು ಘಳಿಗೆಯಲಿ
ಅರಿವಿಲ್ಲದೆ ಪರಿವಿಲ್ಲದೇ ಜೀವ ಝಲ್ಲನೆ ಬೆತ್ತಲೆ
ಆ ಹೊತ್ತಿನಲಿ.
ಕೊಬ್ಬೇರಿದ ಮಬ್ಬಿನಲಿ, ಅಂಗಾಂಗದ ಗೂಳಿ ಮರದಲೋಕದ
ಹೊಸದಾದ ಕಂಪು ಮೆದ್ದವನಂತೆ ಕೆಂಗಣ್ಣು ಹಾಲನುಂಡ
ಹಸುಳೆ ಕದಡಿ, ಹೆಣದ ವಾಸನೆ ಕಾಮೀನ್ಮಕ ಆಹಾ ಯೋನಿ
ಚಕಿತಾ ಹದಗೇರಿದ ಪ್ರಾಣ ತೊಡೆಕಣಿವೆಯ ತಗ್ಗಿನಲಿ ನೆತ್ತರು,
ತುಂಬಿ ಇಡೀ ಹೊಲದಲ್ಲಿ ಬಾಲೆಯ ಅಳು.
*****