ಶಂತನು ಸತ್ಯವತಿಯರ ಪ್ರೇಮ ಪ್ರಸಂಗ

-ಸಮುದ್ರದ ನೀರಿನಿಂದ ಆವರಿಸಲ್ಪಟ್ಟ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಕುರುಜಾಂಗಣವೆಂಬ ದೇಶವಿದ್ದು, ಸಹಜ ಸೊಬಗಿನಿಂದ ಮೆರೆಯುತ್ತ ಸಿರಿಗೆ ತವರುಮನೆಯಾಗಿತ್ತು. ಈ ದೇಶಕ್ಕೆ ಹಸ್ತಿನಾಪುರವೆಂಬುದು ರಾಜಧಾನಿ. ಇಲ್ಲಿ, ಚಂದ್ರವಂಶದ ಅರಸನಾದ ಭರತನ ಪರಂಪರೆಯಲ್ಲಿ ಬಂದಂತಹ ಪ್ರದೀಪನ ಮಗನಾದ ಶಂತನು ಮಹಾರಾಜನು ರಾಜ್ಯವಾಳುತ್ತಿದ್ದನು. ಇವನೊಮ್ಮೆ ಬೇಟೆಯಾಡಲಿಕ್ಕೆಂದು ಕಾಡಿಗೆ ಹೋಗಿದ್ದವನು ಆಯಾಸ ಪರಿಹಾರಾರ್ಥವಾಗಿ ಗಂಗಾನದಿಯ ತೀರದಲ್ಲಿ ವಿಶ್ರಮಿಸುತ್ತಿರುವಾಗ ಪರಮ ಸುಂದರಿಯಾದ ಗಂಗಾದೇವಿಯೆಂಬ ಹೆಣ್ಣನ್ನು ಕಂಡು, ಅವಳ ರೂಪಸಂಪತ್ತಿಗೆ ಮನಸೋತ-

ಜಂಬೂದ್ವೀಪದ ಕುರುಜಾಂಗಣಕ್ಕೆ ರಾಜಧಾನಿ ಹಸ್ತಿನಪುರವು
ಹಸ್ತಿನಪುರದಲಿ ತುಂಬಿತುಳುಕುವುದು ಸಿರಿಸಂತಸಗಳ ಸಡಗರವು
ಸ್ವರ್ಗವೇ ಧರೆಗೆ ಇಳಿದಿದೆಯೇನೋ ಎಂಬ ರೀತಿಯಲಿ ನಾಡಿತ್ತು
ನಾಡಿನ ಮೂಲೆಮೂಲೆಗಳಲ್ಲೂ ಹಚ್ಚ ಹಸುರು ತುಳುಕಾಡಿತ್ತು
ಸದಾ ಕಾಲವೂ ಹರಿಯುವ ನದಿಗಳು ಕಾಲಕಾಲಕ್ಕೆ ಒಳ್ಳೆ ಮಳೆ
ಅದೇ ರೀತಿಯಲಿ ನಾಡಿನಲ್ಲೆಲ್ಲ ಮೂಡಿಬಂದು ಸಮೃದ್ಧ ಬೆಳೆ
ಧಾನ್ಯರಾಶಿಗಳು ಎಲ್ಲೆಡೆಯಲ್ಲೂ ಹೂವು ಹಣ್ಣು ಗಿಡಮರದಲ್ಲಿ
ಧನ್ಯಜೀವಿಗಳು ನೆಮ್ಮದಿಯಿಂದ ಬದುಕುತಲಿದ್ದರು ನಾಡಿನಲಿ!

ಶಂತನು ಎಂಬುವ ರಾಜನು ನಾಡಿಗೆ, ಭರತನ ವಂಶದಿ ಬಂದವನು
ಸುಂದರ, ಸುಧೀರ, ಗುಣಪರಿಪಾಲಕ ಎನ್ನುವ ಕೀರ್ತಿಯ ಪಡೆದವನು
ಒಂದಿನ ಗಂಗಾನದಿಯಲಿ ವಿಹಾರ ಮಾಡಲಿಕ್ಕೆಂದು ಬಂದವನು
ಹರಿಯುವ ಗಂಗಾನದಿಯ ದಡದಲ್ಲಿ ಕಂಡನು ಗಂಗಾದೇವಿಯನು
ಗಂಗೆಯ ಕಂಡು ಮೋಹವಗೊಂಡು ಅವಳ ಚೆಲುವಿಕೆಗೆ ಮನಸೋತು
ಪ್ರೇಮಭಿಕ್ಷೆಯನು ಬೇಡಿದನವಳಲಿ ಕರುಣೆದೋರೆಂದು ಬಳಿನಿಂತು!
ಗಂಗೆಯು ರಾಜನ ಬೇಡಿಕೆಯಾಲಿಸಿ ಷರತ್ತನೊಂದನು ಒಡ್ಡಿದಳು
ತನ್ನ ಕಾರ್ಯಕ್ಕೆ ಅಡ್ಡಿಬರಕೂಡದೆಂದಳವನ ಮನ ಗೆದ್ದವಳು
ಒಂದು ವೇಳೆ ಅವನಡ್ಡಿಮಾಡಿದರೆ ತೊರೆದುಹೋಗುವೆನು ಎನ್ನುತ್ತ
ಎಂದೂ ಮಾತಿಗೆ ಬದ್ಧನಿರಬೇಕು ಎಂದಳು ನೋಡುತ ಅವನತ್ತ
ಸುಂದರಿ ಅಂದಕೆ ಮರುಳಾಗಿದ್ದವ ‘ಆಯಿತು’ ಎಂದನು ಆವೊತ್ತು
ಎಂದಿಗೂ ತಾನು ಪ್ರಶ್ನಿಸೆನೆನ್ನುತ ಅವಳಿಗೆ ವಚನವನವನಿತ್ತು
ಸಂಗಾತಿಯೆನ್ನುತ ಸಡಗರದಿಂದಲಿ ಅಂದೇ ಗಂಗೆಯ ಕೈ ಹಿಡಿದ
ಒಲವಿನ ಮಡದಿಯು ಏನೇ ಮಾಡಲಿ ಮರುಮಾತಾಡದೆ ತಾನುಳಿದ!

ವರುಷವು ತುಂಬುವ ಮೊದಲೇ ಅವಳಿಗೆ ಗಂಡುಮಗುವೊಂದು ಜನಿಸಿತ್ತು
ಗಂಗೆಯು ಮಗುವನು ಗಂಗೆಗೆ ಎಸೆದಳು ನೀರುಪಾಲು ತಾನಾಗಿತ್ತು
ಶಂತನು ಮಾತಿಗೆ ಬದ್ಧನಾಗಿದ್ದ ಮನಸಿನಲ್ಲಿಯೇ ನೊಂದಿದ್ದ
ವಂಶದ ಕುಡಿಯನ್ನು ಕಳೆದುಕೊಂಡವನು ಒಳಗುದಿಯಲ್ಲಿ ಬೆಂದಿದ್ದ
ಮುಂದಿನ ವರುಷದಿ ಜನಿಸಿದ ಮಗುವಿಗೆ ಮೊದಲಿನ ಗತಿಯೇ ಆಗಿತ್ತು
ಹುಟ್ಟಿದ ದಿನವೇ ನೀರುಪಾಲಾಗಿ ಅಣ್ಣನ ಬಳಿಗೆ ಹೋಗಿತ್ತು
ಏಳು ಮಕ್ಕಳೂ ಹೀಗೆಯೆ ಸಾಯಲು ರಾಯನು ಮನದಲಿ ಬಲುನೊಂದು
ಎಂಟನೆ ಪುತ್ರನು ಜನಿಸಿದ ಸಮಯದಿ ಒಲವಿನ ಮಡದಿಯ ಬಳಿಬಂದು
‘ಏತಕೆ ಮಕ್ಕಳು ಸಾಯುತಲಿರುವುವು?’ ಎನ್ನುತ ಅವಳನು ಕೇಳಿದನು
ವಸಿಷ್ಠ ಶಾಪವು* ಕಾರಣವೆಂದಿರೆ ಮಗನನು ಉಳಿಸಲು ಬೇಡಿದನು
ಅರಸನ ಬೇಡಿಕೆ ಮನ್ನಿಸಿ ಮಡದಿಯು ಮಗನನು ಅವನಿಗೆ ಉಳಿಸಿದಳು
`ಮಾತಿಗೆ ತಪ್ಪಿದ’ ಎನ್ನುವ ನೆಪದಲಿ ಗಂಗೆಯು ಗಂಡನ ತ್ಯಜಿಸಿದಳು!
ಅಗಲಿದ ಮಡದಿಯ ಅನುದಿನ ನೆನೆಯುತ ಉಳಿದನು ರಾಜನು ಕೊರಗುತ್ತ
ದಿನದಿನ ಕಳೆಯಲು ಎಲ್ಲವ ಮರೆತನು ವಂಶದ ಕುಡಿಯನು ಸಲುಹುತ್ತ
ವರುಷ ಹದಿನಾರು ಕಳೆದರೂ ರಾಜ ಮರುಮದುವೆಯ ತಾನಾಗಿಲ್ಲ
ಎರಡನೆ ಮದುವೆಯ ಯೋಚನೆಯೆಂಬುದು ಕನಸಲ್ಲೂ ಎದುರಾಗಿಲ್ಲ!
ಅರಸನು ಪ್ರೀತಿಯ ಸುತನನು ಬೆಳೆಸುತ ಕರೆದನು ‘ದೇವವ್ರತ’ನೆಂದು
ಲೋಕದ ಜನಗಳು ದೇವವ್ರತನನು ಕರೆದರು ‘ಗಂಗಾಸುತ’ನೆಂದು
ಗಂಗಾಪುತ್ರನು ಎಲ್ಲಾ ವಿದ್ಯೆಯ ಕಲಿತನು ಭಾರ್ಗವರಾಮನಲಿ
ಮಹಾಪರಾಕ್ರಮಿ ಎನ್ನುವ ಕೀರ್ತಿಯ ಶಾಶ್ವತ ಪಡೆದನು ಲೋಕದಲಿ!

ಒಂದಿನ ಶಂತನು ಬೇಟೆಯನಾಡುತ ಬಂದನು ಯಮುನಾ ನದಿ ಬಳಿಗೆ
ಕಂಡನು ನದಿಯಲಿ ದೋಣಿಯ ನಡೆಸುವ ಸುಂದರ ತರುಣಿಯ ಆ ಘಳಿಗೆ
ಚೆಲುವೆಯು ಅರಸನ ಮನವನು ಸೆಳೆದಿರೆ ನೋಡಿದನವಳನು ಮೈಮರೆತು
ಒಲವಿನ ಬಲೆಯನು ಚೆಲುವೆಯು ಬೀಸಲು ಶಂತನು ಸಿಲುಕಿದ ಸವಿಬೆರೆತು

ಐಲೇಸೊ ಐಸಾ ಓಹೋ! ಸಾಗಲಿ ಐಸಾ ಓಹೋ!
ನೀರಿನ ಮೇಲ್ಗಡೆ ಓಹೋ! ದೋಣಿಯು ತೇಲಿದೆ ಓಹೋ!
ಅಲೆಗಳ ಕುಣಿತದ ಮೋಡಿ! ಮೀನಿನ ಜಿಗಿತವ ನೋಡಿ!
ಬಲೆಯನು ಬೀಸುವ ಹಾಡಿ! ಹರಿಯಲಿ ಮೀನಿನ ಕೋಡಿ!

ಹಾಡನು ಹಾಡುತ ಮೋಡಿಯ ಮಾಡುತ ಸೆಳೆಯುತಲಿದ್ದಳು ಮನವನ್ನು
ನೋಡಿದ ಕೂಡಲೆ ಅರಸನು ಅರ್ಪಿಸಲೆಳಸಿದ ತನುಮನಧನವನ್ನು
ಅರಸನು ಆ ದಿನ ಸೋತನು ಚೆಲುವೆಯ ಬಳಕುವ ದೇಹದ ಮೈ ಸಿರಿಗೆ
ಕೇಳಿದನವಳನು- “ರಾಣಿಯ ಮಾಡುವೆ ಬರುವೆಯ ನನ್ನಯ ಅರಮನೆಗೆ?”
ಸುಂದರಿ ನಾಚುತ ನುಡಿದಳು- “ಪ್ರಭುವೇ, ಕೇಳಿರಿ ಸಲುಹಿದ ತಂದೆಯನು
ತಂದೆಯ ಮಾತನು ಮೀರೆನು ಎಂದಿಗು, ಬನ್ನಿರಿ ತೋರುವೆ ಅವನನ್ನು”
ಶಂತನುರಾಜನ ಕರೆತಂದಿದ್ದಳು ತನ್ನಯ ವಾಸಸ್ಥಾನಕ್ಕೆ
ಎಳೆತನದಿಂದಲಿ ತನ್ನನು ಸಾಕಿದ ನೆಚ್ಚಿನ ತಂದೆಯ ಸನಿಹಕ್ಕೆ!

ಬೆಸ್ತರ ಒಡೆಯನು ದಾಶರಾಜನೋ ಶಂತನು ಮಾತನು ಆಲಿಸಿದ
ಮಗಳ ಭವಿಷ್ಯವು ಎದುರಿಗೆ ಬಂದಿರೆ ಮನದಲ್ಲಿ ತುಂಬಾ ಯೋಚಿಸಿದ
ವಯಸಿನ ಅಂತರ ಬಹಳಷ್ಟಿರುವುದು, ಆಗುವನೇನಿವ ಒಳ್ಳೆ ಸಖ?
ಮಗಳನು ಮುದುಕನಿಗಿತ್ತರೆ ಅವಳಿಗೆ ಸಿಗುವುದು ತಾನೆ ಎಂಥ ಸುಖ?
ಗಂಧವತಿಯ ಸೌಂದರ್ಯವ ನೋಡಿದ ಮುದುಕನ ಮನ ಹಾತೊರೆದಿಹುದು
ಬೆಸ್ತರ ಹುಡುಗಿಗೆ ಪಟ್ಟದರಾಣಿಯ ಪಟ್ಟವು ಏನೋ ದೊರೆಯುವುದು
ಆದರೆ ರಾಜ್ಯದ ಒಡೆತನವೆಂದೂ ಹಿರಿಯ ಮಗನಿಗೇ ದಕ್ಕುವುದು
ಮುದ್ದಿನ ಮಗಳಿಗೆ ಮಕ್ಕಳು ಹುಟ್ಟಲು ದಾಸ್ಯವೆ ಅವರಿಗೆ ಸಿಕ್ಕುವುದು
ಎಂದಾಲೋಚಿಸಿ ಬೆಸ್ತರ ಒಡೆಯನು ನೋಡುತ ಶಂತನು ರಾಜನನು
ಕಡ್ಡಿಯ ಮುರಿಯುವ ರೀತಿಯಲಂದೇ ಒಡ್ಡಿದನೊಂದು ಷರತ್ತನ್ನು!
“ರಾಜನೆ! ಆಲಿಸು ಒಬ್ಬಳೇ ಮಗಳು ಪ್ರೀತಿಯಿಂದ ನಾ ಬೆಳೆಸಿರುವೆ
ಅವಳೇ ನನ್ನಯ ಜೀವದ ಜೀವವು, ಅವಳಲಿ ಜೀವವ ಇಟ್ಟಿರುವೆ
ಒಡೆಯನೆ, ಕುರುಸಾಮ್ರಾಜ್ಯದ ಒಡೆತನ ದೊರೆಕಲಿ ಮುಂದಿನ ದಿನಗಳಿಗೆ
ನನ್ನಯ ಮುದ್ದಿನ ಮಗಳಲಿ, ನಾಳೆಗೆ ಹುಟ್ಟುವ ನಿನ್ನಯ ಮಕ್ಕಳಿಗೆ!”

ಪ್ರೀತಿಯ ಪುತ್ರನು ಗಂಗಾತನಯನು ದೇವವ್ರತ ತಾನಿರುವಾಗ
ಆಗಲಿ ಎನ್ನುತ ಅವನಿಗೆ ವಚನವ ನೀಡಲು ಸಾಧ್ಯವೆ ತನಗಾಗ?
ಮನಸಿಗೆ ಒಪ್ಪದೆ ರಾಜನು ನಡೆದನು ಹಸ್ತಿನಾಪುರಕೆ ಮುಖಮಾಡಿ
ಮನದಲಿ ತಾನು ಕೊರಗುತ ಕುಳಿತನು, ಹಗಲಿರುಳೂ ಸುಂದರಿ ಕಾಡಿ
ಅವಳನು ಪಡೆಯುವ ದಾರಿಯ ಕಾಣದೆ ಶಂತನು ಹಿಡಿದನು ಹಾಸಿಗೆಯ
ದಿನಗಳು ಉರುಳುತಲಿರೆ ಕೃಶನಾದನು ಸಹಿಸದೆ ವಿರಹದ ಬೇಸಿಗೆಯ!
ತಂದೆಯ ಚಿಂತೆಗೆ ಕಾರಣವರಿಯದೆ ದೇವವ್ರತ ತಾ ಮಿಡುಕಿದನು
ಸಾರಥಿ ಮೂಲಕ ಸಂಗತಿ ಅರಿಯುತ ಪರಿಹಾರವ ತಾ ಹುಡುಕಿದನು
ದಶರಥ ನೀಡಿದ ವಚನವ ಉಳಿಸಲು ರಾಮನು ನಡೆದನು ಕಾನನಕೆ
ತಂದೆಯ ಮನಸಿನ ಆಸೆಯ ನೀಗಿಸೆ ಪುತ್ರನು ಬೆಸ್ತರ ಪಾಳೆಯಕೆ!

ತಂದೆಯ ಋಣವನ್ನು ತೀರಿಸಬೇಕಿದೆ ಮಕ್ಕಳು ತಮ್ಮಯ ಬದುಕಿನಲಿ
ನಿಂದೆಯ ಮಾಡದೆ ತಂದೆತಾಯಿಯರ ಸಂಗಡವಿರುವುದು ಹಿತದಲ್ಲಿ
ಸುಂದರ ಬದುಕದು ಚೆಂದವಾಗಿರಲು ಬಂಧುಬಳಗವೂ ಜೊತೆಗಿರಲಿ
ತಂದೆತಾಯಿಯರು ಸಂಗಡವಿರುವುದು, ಭಾಗ್ಯವು ಎಂಬುದು ತಿಳಿದಿರಲಿ

ಮರುದಿನ ಬಂದನು ಯಮುನಾತೀರದ ಬೆಸ್ತರ ಒಡೆಯನ ಬಳಿಯಲ್ಲಿ
ದಾಶರಾಜನಿಗೆ ಕೈಗಳ ಮುಗಿಯುತ ನುಡಿದನು ದೃಢತೆಯ ನುಡಿಯಲ್ಲಿ-
“ಬಂಧುವೆ, ಒಪ್ಪುವೆ ನಿನ್ನ ಷರತ್ತನು ರಾಜ್ಯದ ತ್ಯಾಗವ ಮಾಡುವೆನು
ರಾಜ್ಯದ ಮೋಹವ ಇಂದೇ ಈಗಲೆ ನಿನ್ನೆದುರಲ್ಲೇ ತ್ಯಜಿಸುವೆನು
ತಂದೆಯ ನಂತರ ರಾಜ್ಯದ ಒಡೆತನ ಹುಟ್ಟುವವರಿಗೇ ನೀಡುವೆನು
ತಂದೆಯ ಸುಖವೇ ನನ್ನಯ ಸುಖವು ಎನ್ನುತ ನಿನ್ನಲಿ ಬೇಡುವೆನು
ನನ್ನ ಮಾತಿನಲಿ ನಂಬಿಕೆ ಇಟ್ಟುಕೊ, ಇಲ್ಲವೆ ತಂದೆಯು ಅಳಿಯುವನು
ನನ್ನಯ ತಂದೆಗೆ ನಿನ್ನ ಮಗಳನ್ನು ಕೊಟ್ಟರೆ ತಪ್ಪದೆ ಉಳಿಯುವನು”
ಎನ್ನಲು ಬೆಸ್ತರ ಒಡೆಯನು ನುಡಿದನು- “ನಿನ್ನ ಮಾತನ್ನು ಒಪ್ಪಿದೆನು
ತಂದೆಯ ಆಸೆಯ ತೀರಿಸಲೋಸುಗ ಬಂದಿಹೆ, ನಿನ್ನನು ಮೆಚ್ಚಿದೆನು
ಆದರೆ ಮುಂದಿನ ದಿನದಲ್ಲಿ ನಿನ್ನಯ ಮಕ್ಕಳು ಇದನ್ನು ಒಪ್ಪುವರೆ
ಅವರವರವರಲಿ ಜಗಳವು ಬಂದರೆ ನೆಮ್ಮದಿಯಿಂದಲಿ ಬದುಕುವರೆ?”

ತನ್ನ ಮನಸಿನಲ್ಲಿದ್ದ ದುಗುಡವನು ತಿಳಿಸಿದ ದೇವವ್ರತನಲ್ಲಿ
ಕೆಲಕ್ಷಣ ಮೌನವು ಮನೆ ಮಾಡುತ್ತ ನೆಲೆಸಿತು ಅವರುಗಳೆಡೆಯಲ್ಲಿ!
ಮುಂದಿನ ನಿಮಿಷದಿ ಮೂಡಿತು ನಿಶ್ಚಯ ಸದೃಢ ದೇವವ್ರತನಲ್ಲಿ
ದಾಶರಾಜನನು ಒಪ್ಪಿಸಲೊಂದೇ ಮಾರ್ಗವು ಉಳಿದಿತ್ತವನಲ್ಲಿ
ನುಡಿದನು- “ಅಯ್ಯಾ! ಬಂಧುವೆ, ಆಲಿಸು ಎಂದೂ ಸಂಶಯಪಡಬೇಡ
ಗಂಗಾಪುತ್ರನು ನೀಡಿದ ಮಾತನು ಎಂದೂ ತಪ್ಪನು ಇದು ನೋಡ
ತಂದೆಯ ಹಿತವನು ಕೋರುವೆನೆಂದೂ ಹಿಂದಿಡೆನೆಂದೂ ಹೆಜ್ಜೆಯನು
ನಿನ್ನ ಸಂಶಯವ ತೀರಿಸಲೋಸುಗ ಮಾಡುವೆ ಈಗ ಪ್ರತಿಜ್ಞೆಯನು
ಸೂರ್ಯ, ಚಂದ್ರ, ನಕ್ಷತ್ರಲೋಕಗಳು ಸಾಕ್ಷಿಯಾಗಿ ಇರುವುವು ಇಲ್ಲಿ
ಪಂಚಭೂತಗಳು ಎಲ್ಲ ಲೋಕಗಳು ವೀಕ್ಷಿಸುತ್ತ ನಿಂತಿರುವಲ್ಲಿ
ಭೂಮಿಯಲೆಂದೂ ತಪ್ಪದೆ ಉಳಿವೆನು ಬ್ರಹ್ಮಚಾರಿಯೇ ನಾನಾಗಿ
ನೀಡಿದ ಮಾತನು ಉಳಿಸಿಕೊಳ್ಳುವೆನು ತಾಯಿಯಾಣೆಗೂ ದಿವಿನಾಗಿ”

ಶಂತನುಪುತ್ರನ ಭೀಷಣ ಪ್ರತಿಜ್ಞೆ ಆಲಿಸಿ ಜಗವೇ ಬೆರಗಾಯ್ತು
ದೇವವ್ರತನಿಗೆ ‘ಭೀಷ್ಮ’ನೆಂಬ ಅಭಿದಾನದ ಖ್ಯಾತಿಯ ಬೆಳಕಾಯ್ತು
ದೇವಪುಷ್ಪಗಳು ಉದುರುವ ತೆರದಲಿ ಹನಿಹನಿ ಹೂಮಳೆ ಉದುರಿತ್ತು
ದಾಶರಾಜ ಬಯಸಿದ್ದು ದೊರಕಿತ್ತು, ಮನಸಿನ ಶಂಕೆಯು ಚದುರಿತ್ತು!

ಬೆಸ್ತರ ಹುಡುಗಿಗೆ ಹಸ್ತಿನಾಪುರದ ಪಟ್ಟದರಾಣಿಯ ಸೌಭಾಗ್ಯ
ಭೀಷ್ಮನ ಮನದಲಿ ಜಾಗವ ಪಡೆಯಿತು ಭೋಗಭಾಗ್ಯಗಳ ವೈರಾಗ್ಯ
ಯುವರಾಜನ ಆ ದೃಢನಿಶ್ಚಯಕ್ಕೆ ಲೋಕವೆಲ್ಲ ತಲೆದೂಗಿತ್ತು
ತ್ಯಾಗವ ಮಾಡುವ ವ್ಯಕ್ತಿಗೆ ತಿಳಿವುದು ಅದರಲ್ಲಿನ ಸುಖ ಯಾವೊತ್ತೂ!
ಬೆಸ್ತರ ಒಡೆಯನು ದಾಶರಾಜನೋ ನಾಚಿದ ತನ್ನಯ ಕೃತ್ಯಕ್ಕೆ
ಉತ್ತಮ ವ್ಯಕ್ತಿಯ ಬಾಳನು ಕೊಂದೆನು ಎನ್ನುತ ನೊಂದನು ಆ ಕ್ಷಣಕೆ
ಹೇಳಿದ- “ಕಂದಾ, ಹಿಂದಕೆ ಪಡೆದುಕೊ ನಿನ್ನ ಮನಸ್ಸಿನ ನಿರ್ಧಾರ
ತಂದೆಯ ನಂತರ ನೀನೇ ವಹಿಸಿಕೊ ನಾಡಿನ ಸಾಮ್ರಾಜ್ಯದ ಭಾರ
ಕುರುಸಾಮ್ರಾಜ್ಯದ ಸಿಂಹಾಸನದಲಿ ನೀನು ಕೂರುವುದು ಒಳ್ಳೆಯದು
ಹಿರಿಯನು ನೀನೇ ರಾಜ್ಯವಾಳುವುದು ಪ್ರಜೆಗಳಿಗೂ ಹಿತವಾಗುವುದು

ನನ್ನ ದುರಾಸೆಗೆ ನಿನ್ನ ಸುಖವನ್ನು ಬಲಿಯಾಗಿಸದಿರು ನನಗಾಗಿ
ನಿನ್ನ ಜೊತೆಯಲ್ಲಿ ಮಗಳನು ಕಳುಹುವೆ, ತಂದೆಗೆ ಒಪ್ಪಿಸು ನೀನಾಗಿ”
ಪರಿಪರಿ ವಿಧದಲಿ ಬೇಡಿದ ಆದರೆ, ದೇವವ್ರತ ಅದನೊಪ್ಪಿಲ್ಲ
ತನ್ನ ಪ್ರತಿಜ್ಞೆಗೆ ಬದ್ಧನಾದ ಅವನೆಂದೂ ಮಾತಿಗೆ ತಪ್ಪಿಲ್ಲ
ಭೀಷ್ಮಪ್ರತಿಜ್ಞೆಯ ಮಾಡಿದ ಭೀಷ್ಮನು ಶಾಶ್ವತ ಹೆಸರನು ತಾ ಪಡೆದ
ಮಾನವಲೋಕಕೆ ಮಾದರಿಯಾಗುತ ಮಾನವರೆದೆಯಲಿ ತಾನುಳಿದ
ಭೀಷ್ಮನು ತಂದೆಯ ಬಯಕೆಯ ತೀರಿಸಿ ಸತ್ಯವತಿಯನ್ನು ಕರೆತಂದ
ಕುಂದದ ಕೀರ್ತಿಯ ಲೋಕದಿ ಪಡೆಯುತ ತಂದೆಯ ಮದುವೆಗೆ ಮುಂದಾದ
ಶಂತನು, ಭೀಷ್ಮನ ತ್ಯಾಗವನಾಲಿಸಿ ಮುಮ್ಮಲ ಮರುಗಿದ ಮರುಕದಲಿ
ಎಂತಹ ಪಾಪದ ಕೆಲಸವ ಮಾಡಿದೆನೆನ್ನುತ ಕೊರಗಿದ ಮನಸಿನಲಿ
ತನ್ನ ಕೋರಿಕೆಗೆ ಮಗನ ತ್ಯಾಗವೆ? ಲೋಕದಲ್ಲಿ ಇದು ಸರಿಯೇನು?
ತಾನು ಪಾಪಿ ಎಂದೆನಿಸಿತು ಅವನಿಗೆ, ಬೇರೆಯ ಮಾರ್ಗವು ಇದೆಯೇನು?

ತಂದಾನ ತಂದಾನ ತಂದಾನಾನ ತಂದೆಗೆ ತಂದನು ಹೆಣ್ಣೆಂದನ
ಎಂದಿಗೂ ಬಂಧನ ಬೇಡೆಂದನ ಮುಂದಿನ ಕಂದಗೆ ನಾಡೆಂದನ
ತಂದೆಯು ಮನದಲಿ ದಂಗಾದನ ಚೆಂದದ ಚೆಲುವನು ಹಿಂಗಾದನ?
ಕುಂದದ ಕೀರ್ತಿಯು ಬೇಕೆಂದನ ಸುಂದರ ಬದುಕನ್ನು ತಾ ಕೊಂದನ!

ಭೀಷ್ಮನ ಅಪ್ಪುತ ನುಡಿದನು ಶಂತನು- “ಕಂದಾ! ನನ್ನಲ್ಲಿ ಕರುಣೆಯಿಡು
ದುರ್ಬಲ ಮನಸಿನ ನನ್ನ ಕಾರ್ಯವನ್ನು ಮನ್ನಿಸಿ, ನೋವಿಗೆ ಮುಕ್ತಿ ಕೊಡು
ನನ್ನ ಬಾಳಿನಲಿ ಸರ್ವವೂ ನೀನೆ, ನೀನಿಲ್ಲೆಂದರೆ ನಾನಿಲ್ಲ
ನಿನ್ನಯ ಸುಖವೇ ನನ್ನಯ ಸುಖವು ನಿನಗೇತಕೆ ಇದು ತಿಳಿದಿಲ್ಲ?
ದಶರಥ, ಹೆಂಡತಿ ಮೋಹಕೆ ಬೀಳಲು ರಾಮನು ಕಾಡಿನ ಪಾಲಾದ
ಶಂತನು ಹೆಣ್ಣಿನ ಆಸೆಗೆ ಬೀಳುತ ಪುತ್ರನ ಬದುಕಿಗೆ ಮುಳ್ಳಾದ
ಎನ್ನುವ ನಿಂದೆಯು ಎಂದಿಗು ಉಳಿವುದು, ಬೇಡಪ್ಪಾ ನನಗೀ ಮದುವೆ
ನಿನ್ನ ಪ್ರತಿಜ್ಞೆಯ ಹಿಂದಕೆ ಪಡೆದುಕೊ, ಸಂತಸ ತರುವುದು ನನಗದುವೆ”
ಶಂತನು ಈ ಪರಿ ಬೇಡಿದ ಆದರೆ, ಭೀಷ್ಮನು ಒಪ್ಪಿಗೆ ಕೊಡಲಿಲ್ಲ
ಕೊಟ್ಟ ಭಾಷೆಯನ್ನು ಹಿಂದಕೆ ಪಡೆಯಲು ಅವನ ಮನಸ್ಸನ್ನು ಬಿಡಲಿಲ್ಲ

ಭೀಷ್ಮನು ಮಾತಿಗೆ ತಪ್ಪುವುದುಂಟೇ? ಲೋಕದ ಮೆಚ್ಚುಗೆ ಇರುವಾಗ
ಶಂತನು ಮಗನು ಅದೆಂತಹ ಉತ್ತಮ ಎನ್ನುವ ಕೀರ್ತಿಯು ಸಿಗುವಾಗ!
ಬೇರೆಯ ದಾರಿಯು ಕಾಣದೆ ಶಂತನು ಸತ್ಯವತಿಯನ್ನು ಸ್ವೀಕರಿಸಿ
ಮಗನ ಭವಿಷ್ಯವ ಬಲಿಪಡೆದಂತಹ ತನ್ನಯ ಕೃತ್ಯಕೆ ಕಳವಳಿಸಿ
ತ್ಯಾಗವ ಮಾಡಿದ ಪ್ರೀತಿಯ ಪುತ್ರನ ಭೀಷ್ಮಪ್ರತಿಜ್ಞೆಗೆ ಪ್ರತಿಯಾಗಿ
ಶಂತನು ನೀಡಿದ ತುಂಬಿದ ಮನದಲಿ ಇಚ್ಛಾಮರಣವ ವರವಾಗಿ!

ಶಂತನು ಮದುವೆಯು ಅಂತೂ ಆಯಿತು ದಾಶರಾಜ ಸುತೆ ಜೊತೆಯಲ್ಲಿ
ಕುಂಟುತ ತೆವಳುತ ಎಂತೋ ಸಾಗಿತು ಸುಖದಾಂಪತ್ಯದ ರಥವಲ್ಲಿ
ಮುದುಕನಿಗಾದರು ಇಬ್ಬರು ಮಕ್ಕಳು ಮುಂದಿನ ಎರಡೇ ವರುಷದಲಿ
ರಾಜನ ವಂಶವು ಬೆಳೆಯಿತು ಎನ್ನುತ ರಾಜ್ಯವು ಮುಳುಗಿತು ಹರುಷದಲಿ
`ಚಿತ್ರಾಂಗದ’ ಎನ್ನುವ ಹಿರಿಯವನು ‘ವಿಚಿತ್ರವೀರ್ಯ’ನು ಕಿರಿಯವನು
ಆದರೆ ಮಕ್ಕಳ ಲಾಲನೆ ಪಾಲನೆ ಮಾಡದೆ ಶಂತನು ಗತಿಸಿದನು
ಮಕ್ಕಳ ಪಡೆದರೂ ಚಿಕ್ಕವಯಸಿನಲಿ ಶಂತನು ಪತ್ನಿಗೆ ವೈಧವ್ಯ
ಭೀಷ್ಮನು, ಮಕ್ಕಳ ಹೆಸರಲಿ ಹೊತ್ತನು ಕುರುಸಾಮ್ರಾಜ್ಯದ ಕರ್ತವ್ಯ!
——
*ಗಂಗೆಯು ಒಮ್ಮೆ ಇಂದ್ರಲೋಕದಲ್ಲಿದ್ದಾಗ ಮಹಾಭಿಷಕ್ ಎಂಬ ರಾಜ ಮತ್ತು ಅವಳು ಪರಸ್ಪರ ಆಸೆಯ ಕಣ್ಣುಗಳಿಂದ ನೋಡಿದ್ದರಿಂದ ಇಬ್ಬರೂ ಭೂಮಿಯಲ್ಲಿ ಜನಿಸಬೇಕಾಯಿತಂತೆ. ಅಂತೆಯೇ ವಸಿಷ್ಠನಿಂದ ಭೂಮಿಯಲ್ಲಿ ಜನಿಸುವಂತೆ ಶಾಪ ಪಡೆದಿದ್ದ ಅಷ್ಟವಸುಗಳಿಗೆ ವಿಮೋಚನೆ ನೀಡುವುದಾಗಿ ಗಂಗೆ ಮಾತುಕೊಟ್ಟಿದ್ದಳು. ಅದರಂತೆ ಏಳು ಮಕ್ಕಳಿಗೆ ಮುಕ್ತಿ ನೀಡಿ ಎಂಟನೆಯವನು ಮರ್ತ್ಯಲೋಕದಲ್ಲಿ ಬಹುಕಾಲವಿರಬೇಕೆಂಬ ಶಾಪವಿದ್ದುದರಿಂದ ಅವನನ್ನು ಶಂತನುವಿಗೆ ಉಳಿಸಿಕೊಟ್ಟಳು. ಆ ಮಗುವಿಗೆ ದೇವವ್ರತನೆಂದು ಹೆಸರಿಟ್ಟು ಹದಿನಾರು ವರುಷ ತಾನೇ ಸಾಕಿ ವಸಿಷ್ಠನಿಂದ ವೇದಗಳನ್ನೂ, ಬೃಹಸ್ಪತಿಯಿಂದ ರಾಜ್ಯಶಾಸ್ತ್ರವನ್ನೂ, ಭಾರ್ಗವನಿಂದ ಧನುರ್ವಿದ್ಯೆಯನ್ನೂ ಕಲಿಸಿ ನಂತರ ಶಂತನುವಿಗೆ ಒಪ್ಪಿಸಿದಳಂತೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದುರಂತ
Next post ವಚನ ವಿಚಾರ – ಇದು ಯಾರ ಮೈ?

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…