ಕಾಲ ಮಾಗಿದ ಹಾಗೆ ಆಳ ನಿರಾಳವಾಗಿ
ಹೃದಯಗಳ ಕಂಪನಗಳ ಭಾವ, ಸ್ಪುರಣದ
ಶಕ್ತಿ ಅಂತಃಕರಣ ಕಲುಕಿದ ಕ್ಷಣಗಳು, ಮತ್ತೆ
ಆಧ್ಯಾತ್ಮದ ಅರಿವು ಒಳಗೊಳಗೆ ಇಳಿದಾಗ
ಸೂರ್ಯ ಉದಯಿಸುತ್ತಾನೆ.
ಗಂಧದ ಹೂಗಳ ಪರಿಮಳದ ಸೂಕ್ಷ್ಮ
ಗಾಳಿಯಲಿ ತೇಲಿ ಮನಸ್ಸು ಅರಳಿದಾಗ,
ಅವ ದೋಣಿ ಹಾಕುವ ಹುಟ್ಟಿಗೆ ಬಲ ಬಂದು
ಚಲನೆಯ ಗತಿಯಲ್ಲಿ ಭೂಮಿ ಜನರು, ಮತ್ತೆ
ಅಂಗಳದಲಿ ಎಳೆ ಬಿಸಿಲಿಗೆ ಕಂದನ ಮೈಬಣ್ಣ
ಸೂರ್ಯ ಹಾಡುತ್ತಾನೆ.
ನಮಗೆ ತಿಳಿಯುವುದೇ ಇಲ್ಲ ಈ ಜಗದ
ಪ್ರೀತಿಯ ಅರಿವು ಶಕ್ತಿ ಒಂದು ಸಂಬಂಧದ
ಮೂಲಕ ಸುರಿದು ಹಸಿರು ಚಿಗುರು ಮೇಳೈಸಿದ ಲೀಲೆ.
ಎಲ್ಲೆಲ್ಲೂ ಹೆರಿಗೆ ಮನೆ ಸೂರ್ಯ ಕಂತುತ್ತಾನೆ.
ಎಲ್ಲ ನೋವುಗಳ ದಾಟಿ ಪ್ರೀತಿ ನದಿಯಲಿ
ಮಿಂದು ಎದ್ದ ಗಳಿಗೆ ಆಕಾಶದ ತುಂಬ ನೀಲಿ
ಹರಡಿ ಬೆಳ್ಳಕ್ಕಿಗಳ ಹಾರಾಟದ ಒಲವು, ಮತ್ತೆ
ಬಣ್ಣದ ಚಿಟ್ಟೆಗಳ ಹಾರಾಟ, ವಸಂತನ ಚಿಗುರು,
ಕೋಗಿಲೆ ಹಾಡಿನ ಇಂಪು, ಮನವೆಲ್ಲಾ ಕಂಪು
ಸೂರ್ಯ ತಬ್ಬುತ್ತಾನೆ.
*****