ಢಣಢಣನಾದವು ಕೇಳಿಸಿತೆಂದರೆ,
ದೇವರಪ್ರಾಣವು ಹಾರುವುದು.
ಧರ್ಮಕ್ಕೆ ಬೆಂಕಿಯ ಬೀಳುವದು.
ಸೂರ್ಯನ, ಸಾಗರ ನುಂಗುವುದು.
ದೈತ್ಯರ ಮೇಳವು ಕೂಡುವುದು.
ಕಾಲನ ನೃತ್ಯವು ನಡೆಯುವುದು.
ಭೈರವಿರಾಗವು ಕೇಳುವುದು.
ನರಕವು ಸ್ವಾಗತಗೈಯುವುದು.
ಢಣಢಣನಾದವು ಕೇಳಿಸಿತೆಂದರೆ!


ಝಣಝಣನಾದವು ಕೇಳಿಸಿತೆಂದರೆ,
ದೇವರು ಸೇವಕನಾಗುವನು.
ಆಗಸ ಅರಮನೆ ಮಾಡುವನು.
ಇಂದ್ರನು ಆಯುಧಕೊಳ್ಳುವನು.
ಪರ್ವತಪುಡಿಪುಡಿಮಾಡುವನು.
ಕುಬೇರ ನೃತ್ಯವಗೈಯುವನು.
ಚಿನ್ನದಬುಗ್ಗೆಯ ಪುಟಿಸುವನು.
ಕಾಲನು ಕಿಂಕರನಾಗುವನು.
ಪ್ರಾಣದನಿಟ್ಟನು ಒಟ್ಟುವನು.
ಝಣಝಣನಾದವು ಕೇಳಿಸಿತೆಂದರೆ!


ಢಣಢಣನಾದಕೆ ಓಡುವುದೇಕೋ?
ದೇವರಪೂಜೆಯು ಸಾಗಿಹುದು.
ಮಂಗಲಗೀತವು ಕೇಳುವುದು.
ಭಕ್ತಿಯಭಾವವ ತೋರುವುದು.
ಧರ್ಮದಾರತಿಯ ಬೆಳಗುವುದು.
ತನುನೈವೇದ್ಯವ ನೀಡುವುದು.
ಮಕ್ಕಳ ಮಧ್ಯದಿ ಕೂಡುವುದು.
ಉದಯರಾಗವನೆ ಹಾಡುವುದು.
ಆನಂದದಿ ಕುಣಿದಾಡುವುದು.
ಝಣಝಣನಾದಕೆ ಕೂಡುವುದೇಕೋ?
*****