ಈ ಸಂಸಾರ ಸಾಗರದೊಳು
ತಾವರೆ ಎಲೆಯೊಳು ನೀರಿರುವಂತೆ
ಅಂಟಿರಬೇಕು, ಅಂಟದಿರಬೇಕು|
ಸದಾನಗುವ ತಾವರೆಯಂತೆ
ಮುಗುಳ್ನಗುತಿರಬೇಕು||

ಈ ಸಂಸಾರ ಸಾಗರ
ನಾನಾ ಬಗೆಯ ಆಗರ |
ಅಳೆದಷ್ಟು ಇದರ ಆಳ
ಸಿಗದಿದರ ಪಾತಾಳ|
ಈಗಿದು ಅತೀ ಸುಂದರ, ಸಸಾರ
ಮುಂದೆ ಇದೇ ನಿಸ್ಸಾರ
ವೆನಿಸಬಹುದು |
ಅತೀ ಮೋಹ ಪರವಶನಾಗದೆ
ಹಾಗೆ ನಿರುತ್ಸಾಹಿಯೂ ಆಗಿರದೆ
ಸಮಚಿತ್ತದಲಿ ಜೀವನ ನಡೆಸಬೇಕು||

ಸಂಸಾರವಿರಬೇಕು
ಜೀವನ ಸಾಕ್ಷಾತ್ಕಾರಕೆ|
ಸಂಸಾರವಿರಬೇಕು
ವಂಶೋದ್ಧಾರಕೆ|
ಸಂಸಾರವಿರಬೇಕು
ಮುಕ್ತಿ ಮಾರ್‍ಗಕೆ |
ಸಂಸಾರದಲಿ ಗಂಡು ಹೆಣ್ಣು
ಒಂದುಗೂಡಿ
ಹೂವು ನಾರು ಸೇರಿ ಹಾರವಾಗಿ
ಶಿವನ ಪಾದ ಸೇರುವಂತೆ
ಸತಿ ಪತಿಯರಿಬ್ಬರಿಗೂ
ಪರಲೋಕಸ್ವರ್‍ಗ ಪ್ರಾಪ್ತಿಯಾಗುವಂತೆ
ಸಂಸಾರ ಮಾಡಬೇಕು||
*****