ಕೊಳಲ ನುಡಿಸು ಕಿವಿಯೊಳನಗೆ
ಚೆಲುವ ಮೋಹನಾ!
ಕೊಳಲ ನುಡಿಸಿ ಪ್ರೇಮಸುಧೆಯ
ಮಳೆಯ ಸುರಿಸಿ ಹೃದಯ ತಾಪ
ಕಳೆದು ತಿಳಿವಿನೆಳಬಳ್ಳಿಯ
ಬೆಳೆಯಿಸಿ ಬೆಳಗೆನ್ನ ಮನವ….
ಚೆಲುವ ಮೋಹನಾ!
೧
ಎಳೆಯತನದಿ ಹಸುಗಳ ಜಂ-
ಗುಳಿಯ ಕಾಯಲೆಂದು ಬನಕೆ
ಗೆಳೆಯರೊಡನೆ ಹೋಗಿ ಹೊಳೆಯ
ಮಳಲಿನಲ್ಲಿ ನಿಂತು ನುಡಿಸಿ….
ತಿಳಿನೀರನು ಕುಡಿಸಿ ಧೇನು-
ಗಳನು ತಣಿಸಿ ಚೈತನ್ಯದ
ಕಳೆಯ ನಿಲಿಸಿ ಸ್ಥಿರ-ಚರದಲಿ
ಇಳೆಯನು ನಲಿದಾಡಿಸಿರುವ….
ಚೆಲುವ ಮೋಹನಾ !
ಕೊಳಲ ನುಡಿಸು ಕಿವಿಯೊಳೆನಗೆ
ಚೆಲುವ ಮೋಹನಾ !
೨.
ಕುಂಜಮುಖದ ಸಖಿಯರ ಮನ
ಮಂಜುಳವಹ ರಾಗದಿಂದ
ರಂಜಿಸುತಾಕೆಯರ ಹೃದಯ
ಪಂಜರಶುಕನಾಗಿ ನೀನು….
ಭಂಜಿಸಿ ಭವಭಯ ಮಾಯೆಯ
ಮಂಜನೆಲ್ಲ ಮರೆಮಾಡಲು
ಸಂಜೆಯ ಸವಿಸಮಯದಲ್ಲಿ
ಕುಂಜವನದಿ ಕುಳಿತೂದಿದ…
ಚೆಲುವ ಮೋಹನಾ !
ಕೊಳಲ ನುಡಿಸು ಕಿವಿಯೊಳೆನಗೆ
ಚೆಲುವ ಮೋಹನಾ!
೩
ಭಿನ್ನ ವಿಷಯಕೆಳಸದಂತೆ
ಚೆನ್ನ ನಿನ್ನ ಕೊಳಲ ನುಡಿಸಿ,
ನನ್ನ ಮನದ ಮೃಗವ ತಣಿಸಿ
ನಿನ್ನೊಳದರೆ ನೋಟ ನಿಲಿಸಿ….
ತನ್ಮಯವನ್ನಾಗಿ ಮಾಡಿ
ನಿನ್ನ ನೆರೆಯಲಿರಿಸಿಕೊಳ್ಳೊ
ಬಿನ್ನಹವೆನ್ನದು ಮನ್ನಿಸಿ
ಚಿನ್ಮಯ ಶ್ರೀಕೃಷ್ಣ ಮೂರ್‍ತಿ….
ಚೆಲುವ ಮೋಹನಾ !
ಕೊಳಲ ನುಡಿಸು ಕಿವಿಯೊಳೆನಗೆ
ಚೆಲುವ ಮೋಹನಾ!
*****