ಶೃಂಗಾರ ಕಾವ್ಯ ರಚಿಸುವೆ
ನೀ ಸಹಕರಿಸಿದರೆನಗೆ|
ಶೃಂಗಾರತೆಯ ವಿರಚಿಸುವೆ
ಅಮರ ಪ್ರೇಮಿಯಾಗಿ
ನಿನ್ನ ಸಹಯೋಗದೊಳಗೆ||

ನಾ ಬರೆಯಲನುವಾಗೆ
ತೆರೆದಿಡುವೆಯ ನಿನ್ನಯ
ಸಿರಿ ಸೌಂದರ್‍ಯ ಪುಟವ|
ಮೋಹ ಮನ್ಮಥನಾಗಿ ರಚಿಸುವೆ
ನೂತನ ರತಿ ಸಂವಿಧಾನ|

ಬೆತ್ತಲ ಕಾಳಿರುಳ ಹೊದ್ದು
ಬೆವರ ಮಡಿಯಲಿ ಮಿಂದು|
ಬಿಸಿಯುಸಿರಲಿ ಸೇರಿ ಬೆರೆತು
ತನುಮನಗಳೊಂದಾಗಿ ಬೆಸೆದು
ಇಬ್ಬರೊಂದೇ ದಾಂಪತ್ಯಸುಖಾನಂದವ
ಹೊಂದಲು ಸಹಕರಿಸುವೆಯಾ||

ತನುವಿನೊಳಗಿನ ಯೌವನದ
ಬೆಂಕಿಯ ಆರಿಸಲನುವಾಗು|
ಬೀಜಗಟ್ಟಿದ ಕಾರ್‍ಮೊಡಗಳು ಮರ್‍ದಿಸಿ
ಮಿಂಚು ಮೇಳೈಸಿ ಮಳೆ ಸುರಿಯುವಂದದಿ|
ಪ್ರಕೃತಿ ಪುರುಷತನ
ಬಳಸೊಂದು ಶೃಂಗಾರ
ಕಾವ್ಯ ರಚಿಸಲಣಿಯಾಗುವೆಯಾ||
*****