ಬಾರ ಕಾರಹುಣ್ಣಿವೆ,
ದೈವದ ಕಾರುಣ್ಯವೆ!


ದೂರದಿಂದ ನಿನ್ನ ವಾರ್ತೆ
ಹಾರಿ ಸಾರಿ ಬರುತಲಿದೆ….
ಹಾರಯಿಸುತ ನಿನ್ನ ಬರವ
ದಾರಿ ಕಾಯ್ವೆನೆಂದಿನಿಂದೆ ;
ಬಾರ ಕಾರಹುಣ್ಣಿವೆ,
ನಮ್ಮೆಲ್ಲರ ಪುಣ್ಯವೆ?


ಬಡವರ ಬರಿಯೊಡಲಿನಂತೆ
ಬರಿದು ಬರಿದು ಬಾನೆಲ್ಲಾ….
ಉಡಿಗೆಯಿರದ ಗರತಿಯಂತೆ
ತೆರಹು ತರಹು ಬುವಿಯೆಲ್ಲಾ!
ಬಾರ ಕಾರಹುಣ್ಣಿವೆ,
ವೈಭವ ಸಂಪೂರ್ಣವೆ!


ಸೋಗೆನವಿಲು ವೈಶಾಖದ
ಬೇಗೆಗಳುಕಿ ಮಿಡುಕುತಿವೆ….
ಕೇಗು ಕುಣಿತ ಮರೆದು ನಿನ್ನ
ಆಗಮನಕೆ ದುಡುಕುತಿವೆ;
ಬಾರ ಕಾರಹುಣ್ಣಿವೆ,
ರಸಜನ ಸನ್ಮಾನ್ಯವೆ!


ರವಿ ಬೆಳಗಿದ, ಬಂದಿತೇನು ?
ಶಶಿ ತೊಳಗಿದ ಸಂದಿತೇನು ?
ಹಸಿದಾತನ ಕಣ್ಣು ಕುರುಡು,
ಬೆಳಗು ಬೈಗು ಸಮವೆ ಎರಡು !
ಬಾರ ಕಾರಹುಣ್ಣಿವೆ,
ಕ್ಷುಧಿತ ಜನಶರಣ್ಯವೆ!


ಕರ್‍ಮೋಡದ ತೆರೆಯ ಬಾನ
ಮಾಡಿ ನಿನ್ನ ಕುಣಿತದಾಣ
ಕೋಲ್‌ಮಿಂಚಿನ ಕತ್ತಿಹಿಡಿದು
ಗುಡುಗಿನ ಅಡಿಗೆಜ್ಜೆ ಜಡಿದು.
ಬಾರ ಕಾರಹುಣ್ಣಿವೆ,
ನಟಸಂಕುಲಗಣ್ಯವೆ !


ಹಳೆಯ ಹುಲ್ಲು-ಗಿಡ-ಮರ ಹೊಸ
ಮಳೆಗೆ ತಳಿರಲಾಶಿಸುತಿವೆ ;
ನೆಲದಿ ಹುದುಗಿದೆನಿತೊ ಬೀಜ
ಮೊಳೆತು ಬೆಳೆಯಲೆಳಸುತಿವೆ….
ಬಾರ ಕಾರಹುಣ್ಣಿವೆ,
ಪ್ರಕೃತಿಯ ಚೈತನ್ಯವೆ!


ಎದೆಯರಳುವ ಚೆಲುವ ಸಲಿಸಿ
ಒಡಲ ಹೊರೆವ ಬೆಳಸ ಬೆಳಸಿ
ಗುರಿಯ ಗೆಲುವ ನೆಲೆಯ ತಿಳಿಸಿ
ಧರೆಯೊಳೆ ಸುರಲೋಕ ನೆಲಸಿ
ಬಾರ ಕಾರಹುಣ್ಣಿವೆ,
ನಿನಗಂತಹ ಕಣ್ಣಿವೆ!


ದೇವದಿನವೆ ನೀನೈತರೆ
ಜೀವಕುಲದ ಹಸಿವಯ ಕೊರೆ-
ಯಾರಿಸಿ ಬಿಡುವಂಥ ಬಸಿರ
ಭೂರಮಣಿಯು ಪಡೆವಳು, ತ್ವರ-
ಬಾರ ಕಾರಹುಣ್ಣಿವೆ,
ಶಾಂತಿಸುಖದರಣ್ಯವೆ!
*****