ಅರ್‍ಧಕೆ ನಿಂತ ಹಾಡುಗಳೆ
ಹಾಗೇ ನೀವಿರುವರೆ
ಶಬ್ದ ಮರೆತವೊ ಅರ್ಥ ಸಿಗದಾದುವೊ
ಹಾಗೇ ನೀವಿರುವರೆ

ಅರ್‍ಧಕೆ ನಿಂತ ಇಮಾರತುಗಳೇ
ಹಾಗೇ ನೀವಿರುವರೆ
ಯಾರು ಕಲ್ಪಿಸಿದ್ದರೋ ಯಾರು ಬಯಸಿದ್ದರೋ
ಹಾಗೇ ನೀವಿರುವರೆ

ಅರ್‍ಧಕೆ ನಿಂತ ಪತ್ರಗಳೆ
ಹಾಗೇ ನೀವಿರುವರೆ
ಯಾರ ಕರೆದಿದ್ದುವೊ ಯಾರಿಗೆ ಬರೆದಿದ್ದುವೊ
ಹಾಗೇ ನೀವಿರುವರೆ

ಅರ್‍ಧಕೆ ನಿಂತ ಚಿತ್ರಗಳೆ
ಹಾಗೇ ನೀವಿರುವರೆ
ರೂಪವೇನಾದುವೊ ಬಣ್ಣವೇನಾದುವೊ
ಹಾಗೇ ನೀವಿರುವರೆ

ಅರ್ಧಕೆ ನಿಂತ ಕನಸುಗಳೆ
ಹಾಗೇ ನೀವಿರುವರೆ
ಎಚ್ಚರಾದುವೊ ಮೈಬೆಚ್ಚಿ ಬಿದ್ದುವೊ
ಹಾಗೇ ನೀವಿರುವರೆ

ಅರ್‍ಧಕೆ ನಿಂತ ಮೂರ್‍ತಿಗಳೆ
ಹಾಗೇ ನೀವಿರುವರೆ
ಉಳಿಯು ಮುಕ್ಕಾಯಿತೊ ಕೈಯು ಸುಸ್ತಾಯಿತೊ
ಹಾಗೇ ನೀವಿರುವರೆ

ಅರ್‍ಧಕೆ ನಿಂತ ನಿಮಿಷಗಳೆ
ಹಾಗೇ ನೀವಿರುವರೆ
ಯುಗ ಸ್ಥಗಿತವಾಯಿತೊ ಜಗವೆ ಬೆರಗಾಯಿತೊ
ಹಾಗೇ ನೀವಿರುವರೆ
ನಾವೆ ಅನಿಮಿಷರಾಗೆವೆ
*****