ಯಾರಿಗೆ ಏನೆಲ್ಲ ಕೊಟ್ಟೆ
ಯಾರಿಂದ ಏನೆಲ್ಲ ಪಡೆದೆ?

ಪ್ರೀತಿ, ಸ್ನೇಹ, ಕರುಣೆ
ಕೂಡಿದೆ.

ಸೇಡನ್ನು ಕೇಡಿನಿಂದಲೂ
ಸಂಚನ್ನು ವಂಚನೆಯಿಂದಲೂ
ಗುಣಿಸಿದೆ

ಪ್ರೇಮವನ್ನು ಕಾಮನೆಯಿಂದ
ಭಾಗಿಸಿದೆ.

ಆನಂದ-ಅನುಭೂತಿಯ ಮೂಲ?
ತಡಕಾಡಿದೆ…

ಲೆಕ್ಕ ಪಕ್ಕಾ ಹೌದೋ ಅಲ್ಲವೋ
ಅನುಮಾನ…
ತಾಳೆ ನೋಡಿದರಾಯಿತು ನಾಳೆ
ಎಂದು ಎವೆ ಮುಚ್ಚಿ ಇಳಿದೆ
ಒಳಗೆ.

ಮುಚ್ಚಿದ ಕೂಡಲೆ ಕಣ್ಣು
ಅನಿಸಿತು…
ಹಿತವಾಗಿದೆ ಈ ಮಣ್ಣು!

ಹಂಬಲಿಸಿ ಪಡೆದ
ಈ ಜೀವಮಾನದ ನಿದ್ದೆ
ಎಲ್ಲಿಗೆ ಕರೆದೊಯ್ಯುವುದೋ
ನಾ… ಕಾಣೆ…

ಇದರಾಳ, ಎತ್ತರ, ಉದ್ದಗಲ
ವಿಸ್ತಾರ ಅಳೆದು ವಿವರಿಸುವ
ಸೂತ್ರ ನನ್ನಲ್ಲಿ ಇದ್ದಿದ್ದರೆ…
ಲೆಕ್ಕ ಚುಕ್ತಾ ಮಾಡುತ್ತಿದ್ದೆ.
*****