ಇಲ್ಲವೆಂದರೂ
ಇಲ್ಲವಾಗುವುದೇ?

ನೆನಪು-
ಹುಲ್ಲು ಗರಿಕೆಯಂತೆ
ಹಸಿರಾಗಿದೆ.

ಆ ಚಿತ್ರ ಅವನದೇ
ಮಳೆಬಿಲ್ಲಿನಂತೆ
ಭರತ ಖಂಡದ ಮೇಲೆ ಬಾಗಿದೆ
ತಂಗಾಳಿ ಅದನು ತೂಗಿದೆ.

ಕಣೋಳಗಿನ ಮಿಂಚು
ಭೂಮಂಡಲವ ಬೆಳಗಿದೆ
ನಿಸ್ವಾರ್ಥ ನಗೆ
ಮೂಲೆ ಮೂಲೆಯನೂ ತಾಕಿದೆ

ಸರಕು ಸಂತೆಯಲಿ
ಗೌಜು ಗದ್ದಲದಲಿ
ತುಸು ನೂಲ
ತಾನೇ ನೂಲುತಿದೆ ಚರಕ

`ಅರಿವೆ’ ಅರಿವೆಂಬ ರೂಪಕ
ಅಳಿಸಲಾಗದು ಅಚ್ಚೊತ್ತಿದಂತಿದೆ

ಅಷ್ಟು ಸುಲಭವಾಗಿ
ಆರದು
ಅವನು ಹಚ್ಚಿದ ದೀವಿಗೆ.
*****