ಸಾಧುಗಳಿಗಿದೆ ಸಾಧನವೋ ಸುಜ್ಞಾನವೋ         ||ಪ||

ಪದುಮ ದಳದ ಮದವು ಬೆಳೆದು
ಸದಮಲಾತ್ಮಯೋಗ ತುದಿಯ-
ಲದನುಯೇರಿ ಮೆರೀದು ಬೆರಿದು
ಕದಲದಂತೆ ಕರುಣ ರಸದ                           ||೧||

ಚಂದ್ರ ಸೂರ್ಯರೊಂದುಗೂಡಿದಾ ಅಲ್ಲೆ ಮೂಡಿದಾ
ರಂಧ್ರದೂಳಗೆ ಹೊಳೆವ ಮಿಂಚು
ಒಂದೇ ದೃಷ್ಟಿಯಿಂದ ನೋಡಿ
ಸಿಂಧುಶುಚಿನಾಥ ತಿಳಿದು ಬಿಂದುವಸ್ತು ಸವಿದು ಪರಮ  ||೨||

ಭೂತ ಪಂಚಕವನಳಿದು ತೋರುವಾ
ಸಂಪ್ರೀತಿಯಿಂದ ಮಾತು ಮಾತಿಗೆ ಮೋಜುಗಾಣುವಾ
ಧಾತ ಪರಬ್ರಹ್ಮನೇ ಈತನೆಂದು
ಅರಿತು ಪವನಜಾಗದೊಳಗೆ ಜನ್ಮರೀತಿ
ಕೌತುಕದಿ ಕುಳಿತು ಮೆರೆವ                                ||೩||

ತಾಗುಬಾಗುವೆಲ್ಲ ಕಳಿದನು ಅಲ್ಲಿಳಿದನು
ಯೋಗ ಸಾಧನವನ್ನು ಮಾಡಿ
ಭೋಗ ವಿಷಯ ಕೂಗೆದೂಡಿ
ರಾಗದಿಂದ ರಜದ ಕೊನೆಯ
ಮೇಲೆ ನಿಂತು ಚಂದ್ರ ಜ್ಯೋತಿ                           ||೪||

ಚಾಗು ಸದಾನಂದಜಲದೊಳು ಬೋಧಾ
ಅಗಲತೆಯನೇಕ ಮಂತ್ರ ಮೂಲಕಲೆಗಳಾ
ಏಕನಾಥ ಶಿಶುನಾಳಧೀಶನಲ್ಲಿ ತಾಕಿ ತಾಕಿ
ಜೋಕಿಯಿಂದ ಜನನ ಮರಣ ನೂಕಿ ನಿಲುವಂಥ         ||೫||

****