ಆ ದಂಡೆ ಬೇಕು ಅದ ಸೇರಬೇಕು,
ಈ ನದಿಯ ದಾಟಬೇಕು
ಈ ನದಿಯು ಬೇರೆ ಆ ದಂಡೆ ಬೇರೆ,
ಎಂಬುದನು ತೊರೆಯಬೇಕು || ೧ ||

ದಂಡೆಯಿದೆ ನದಿಗೆ ಆಸರೆಯಿತ್ತು
ದಂಡೆಗಿದು ನೀರು ಕೊಟ್ಟು
ತಣಿಸುವುದು ವನಕೆ ಉಣಿಸುವುದು ಅದರ
ಬಾಳಿರದು ಇದನು ಬಿಟ್ಟು || ೨ ||

ಗರ್ಭಗುಡಿ ಸೇರೆ ದ್ವಾರವನು ದಾಟು,
ಪೂಜಾರಿ ಮಧ್ಯ ಶಿವಗೆ
ಅರಮನೆಯ ಒಳಗೆ ದಾಟಲಿಕೆ ಮೊದಲು
ಬಾಗಿಲಲಿ ಭಟನು ಹೊರಗೆ || ೩ ||

ಮರಹತ್ತಲಿಕ್ಕೆ ಹೂಹಣ್ಣಗಳನು
ಪಡೆಯಲಿಕೆ ಸವಿಯಲಿಕ್ಕೆ
ಬೇರಿಹುದು ದೊಡ್ಡ ಕೊಂಬೆಗಳು ಮತ್ತೆ
ಮೊದಲ ಋಣಪಡೆಯಲಿಕ್ಕೆ || ೪ ||

ಇಹವನ್ನು ಬಿಟ್ಟು ಪರವಲ್ಲಿ ಬಂತು
ಇಹಬೇರು ಪರವು ಮರವು
ಒಳ ಹಸಿವಿಗನ್ನ ಕೊಡುವುದಕೆ ಮುಂಚೆ
ಹೊರ ಜಠರ ಬೇಡುತಿಹುದು || ೫ ||
*****