ಕಳೆಯನು ಕಳೆಯದೆ ನಾನಿನ್ನ ಕಾಣೆನು
ಸರಸಮ್ಮ ನೀನೆಷ್ಟು ಕಳವಂತಿಯೆ
ಹೊಲದಲ್ಲಿ ತುಂಬಿರುವ ದನಗಳನಟ್ಟದೆ
ಬೆಳೆಯನ್ನು ಕಾಣೆನು ರಸವಂತಿಯೆ || ೧ ||
ಈ ಮಣ್ಣು ಈ ನೀರು ಗಾಳಿ ಬೆಂಕಿಗಳಿಂದ
ಹೊಲದಲ್ಲಿ ಬೆಳೆಯನು ಬೆಳೆಯಬಹುದು
ಬರಿಸೊಪ್ಪೆ ಬೆಳೆದರೆ ಹೊಟ್ಟಿಗೆ ಬರಿಮಣ್ಣು
ಕಳೆಯ ಕಾಳಿಲ್ಲದೆ ಗೆಯ್ಮೆ ಬರಿದು || ೨ ||
ಅಡವಿಯ ಪೈಣದಿ ಕಣ್ಣು ಕಾಣಿಸದಂತೆ
ಎಡರು ತೊಡರುಗಳಲ್ಲಿ ನಾನಿರುವೆನು
ತೊಡರನು ಬಿಡಿಸಲೇ ಬಡಿದಾಟ ಸಾಗಿದೆ
ಹೊಡಮುರಿದೇಳ್ವುದು ಬಯಕೆ ಬಳ್ಳಿ || ೩ ||
ಆಗೊಮ್ಮೆ ಈಗೊಮ್ಮೆ ಮರಗಳ ಸಂದೀಲೆ
ಹಣಿಕೆ ಹಾಕುವುದಿನ್ನು ಬಯಕೆ ಬಾನು
ಛಳಕು ಹೊಡೆದಂತಾಗಿ ಬೆಳಕನ್ನು ಕಾಣುವೆ
ಕೈಯಲ್ಲಿ ಸಿಗಲದು ಕೋಲು ಏನು || ೪ ||
ಭೂಮಿಗೆ ಬಾರದೆ ಮಿಂಚನು ಮೆರೆಯುತ್ತ
ಮೋಡದ ಮರೆಯಿಂದ ನೀನಿಳಿಯಲಾರೆ
ನಿನಗಾಗಿ ಕಾಯುತ್ತ ಹಳ್ಳ ಕೆರೆಗಳಂತೆ
ಬರಿದಾದ ಎದೆಯಿಂದ ನಾನೇರಲಾರೆ || ೫ ||
ನೂರಾರು ಸಂತೆಯ ಮಾಡಿದರು ಬರಿಗೈಯಿ
ಕೊಡುವುತ್ತ ನಿಂತೇನು ಹತಭಾಗ್ಯನು
ತಿರುಗಿ ದಣಿದದ್ದೊಂದೆ ಕೂಗಿ ಮಾರಿದ್ದೊಂದೆ
ಕೈಯಲ್ಲಿ ಉಳಿದಿಲ್ಲ ಚಿಕ್ಕಾಸೇನೂ || ೬ ||
ಎಷ್ಟೊತ್ತು ಕಾಯ್ಬೇಕು ತೆಗೆಯಮ್ಮ ಬಾಗಿಲ
ಭಿಕ್ಷುಕ ನಿಂತೀನಿ ಮನಿಯ ಮುಂದೆ
ಏನಾದರೊಂದಿಷ್ಟು ಉಳಿದಿದ್ದು ಕೊಟ್ಟರೆ
ಹರಸುತ್ತ ಹೋಗುವೆ ಇನ್ನು ಮುಂದೆ || ೭ ||
*****