ಎಲೆಲೆ ತಿಗಣಿಯೆ ನಿಲ್ಲು
ಕೆಲವು ಪ್ರೆಶ್ನೆಗಳನ್ನು ಕೇಳುತ್ತೇನೆ : ಉತ್ತರಿಸಿ ಹೋಗು
ನನ್ನ ಬಿಸಿ ನೆತ್ತರನು ಕುಡಿದ ನಿನಗೆ
ಕೇಳುವ ಹಕ್ಕು ಇದೆಯೋ ನನಗೆ ಇಲ್ಲವೋ
ಡನ್ ಎಂಬ ಕವಿಯೊಬ್ಬನಿದ್ದ
ಸೊಳ್ಳೆ ಹೀರಿದ ನೆತ್ತರಲ್ಲಿ
ಅವನಿಗಾಯಿತಂತೆ ಪ್ರಿಯೆಯ ಸಂಯೋಗ
ಹಾಗಾದರಿಲ್ಲಿ ಕೇಳು :
ನನ್ನ ನೆತ್ತರು ಕುಡಿದ ನಿನ್ನೊಳಗೆ
ನಾನೆಷ್ಟು ಜನರೊಡನೆ ಕೂಡಿಕೊಂಡೆ ?
ಪೈತಾಗರಸನೆಂಬವನಿದ್ದ ;
ಪರಕಾಯ ಧಾರಣೆಯ ಕುರಿತು ಹೇಳಿದ್ದ
ನನ್ನ ನೆತ್ತರು ನಿನ್ನೊಳಗೆ ಹರಿದಾಗ
ನಾನು ನೀನಾದೆನೋ ಹೇಗೆ ?
ಶ್ರೀಮತಿ ಟಿ ಕುಡಿದ ಟೀಯೆಲ್ಲ
ಶ್ರೀಮತಿ ಟೀಯೆ ಆಗುವಂತೆ
ನನ್ನ ಈ ರಕ್ತ ತಿಗಣಿಯೇ ಆಗುವುದೋ ?
ತತ್ವಮಸಿ ಅಹಂ ಬ್ರಹ್ಮಾಸ್ಮಿ ಎಂಬುದರ
ಫಿಲಾಸಫಿ ಏನು ?
ನಿನ್ನ ರಹಸ್ಯ ಏನು ?
*****