ಸೋದರಿಯು ಇವಳೆನ್ನ
ಅದರಿಸಿ ಬರಿಸಿ, ಹರಸಿ,
ಸೋದರನ ತನು-ಮನವು ರೋಸಿಹೋಗುವ ಮುನ್ನ

ಬಾಳಿನಲೆಮ್ಮ ಬಿರುಗಾಳಿ ಬಂದಿತ್ತು
ಸೋಲು ಅಡಿಗಡಿಗೆ ಕಾಲಿರಿಸಿತ್ತು.
ಗೇಲು ಎಲ್ಲಿಯೊ ಕಾಲು ಕಿತ್ತಿತ್ತು.

ಅಂದು ಜೀವನದ ಮಾಮರದ ಅಡಿಯೇಳತಿತ್ತು.
ತಂದೆ ಸಾವಿಗೆ ಸಿಲುಕಿ – ಉಸಿರು ನಡುಗುತಿತ್ತು
ಮುಂದೆ ಶಯ್ಯೆಯ ತಂಗಿ, ಹೃದಯ ಮೊರೆಯಿಡುತಿತ್ತು

ಬಾಲಕಾಲದ ಬಾಲ ವಿಹಾರ
ಕಾಲ ಕಾಲಕೆ ತಿಂದುಂಡು ನಲಿವ ಹೂಹಾರ
ಹಾಲಿನಂದದಿ ಬರಿದೆ ಚೆಲ್ಲಿ ಹೋಗಿತ್ತು.

ತಾಯ ಕರುಳಿನ ಕರೆಯೆ ಕೇಳದಂತಿತ್ತು
ಮಾಯಗೊಂಡಿತ್ತು ಮಮತೆ,
ಬಾಯ ನಲ್ವಾತು ದೂರ ಓಡಿತ್ತು.

ಕಂಬನಿಯ ಚುಂಬನದ ಬದುಕು
ಮುಂಬನಿಯ ಅಭಿಷೇಕ ಅದಕು,
ಅಂಜಿಸುವ ಅಪವಾದ; ಹಿಂಜಿಸುವ ಅಳುಕು

ಹೃದಯ ಮರುಗಿತ್ತು ಕರಗಿತ್ತು ಎನ್ನ
ಅಧರ ನಡುಗಿತ್ತು. ಬಿರಿದಿತ್ತು ಸಿರಿವೆಣ್ಣ
ಸೋದರಿಯು ಮರೆಯದಿರಿ ಇವಳೆನ್ನ…..

ಒಂದಿಗೆಯೆ ಕೆಲ ಕಾಲ ಕಳೆದೆವು
ನಂಬಿಗೆಯ ಕಣ್ಗಳಲಿ ಮೆರೆದೆವು
ಇಂದಿಗದು ಮುಗಿದಿತು, ಮುಂದಿನದ ತಿಳಿಯೆವು!

ಹಾಳು ಈ ಜಗವು
ಹಾಳು ಇಲ್ಲಿಯ ರೀತಿ
ಗೋಳು ಹೊಯ್ಯವರು ತನ್ನವರು ಇಲ್ಲಿಲ್ಲ ಪ್ರೀತಿ

ನೋವ ಮಾಡದಿರಿ ಮನಕೆ
ಜೀವ ದಣಿಸದಿರಿ,
ಹೂವಿನಂದದಿ ಸಲಹಿ ವ್ಯಥೆಯನಳಿಸಿ

……ಹೋಗವ್ವ ನಲ್ದಾಯಿ
ಭಾಗ್ಯ ಲಕ್ಷ್ಮಿಯೆ, ಪತಿ ಮನೆಗೆ
ಯೋಗ್ಯರವರಿನ್ನು ತಾಯ್ತಂದೆ ನಿನಗೆ!

ಕಂಬನಿಯೆ ಸುರಿಯದಿರು
ಇಂದಿನಿತೆ ಸಾಕು, ಹರಿಯದಿರು,
ತಂಗಿ ಇವಳೆನ್ನ ಮರೆಯದಿರು.
*****