ಜಾಗತೀಕರಣದ ಹೊಸಿಲಲ್ಲಿ ನಿಂತಿರುವ ರೈತನಿಗೊಂದು ಕಿವಿಮಾತು

ಯಾವಾಗ ನೋಡಿದ್ರೂ
ಜರಿಶಾಲು, ರೇಷ್ಮೆ ಪೇಟ
ದೀಪಾ-ಧೂಪಾ
ಹೂವು-ಹಾರ ಜೊತೆಗೆ
ನಾಯಕರ ನಗೂ ಮುಖ
ಹೊತ್ಕೊಂಡು ಬರ್‍ತಾ ಇದ್ದ
ಪೇಪರ್‌ನಾಗೆ ನಿನ್ನ
ಸುದ್ದಿನೂ ಓದ್ದೇ ಕಣಪ್ಪಾ…

ದಿಕ್ಕಿಲ್ಲದಂಗೆ ರಾಶಿ ಬಿದ್ದಿದ್ದ
ಟೊಮೊಟೊ, ಆಲೂಗಡ್ಡೆ, ಮೆಕ್ಕೆಜೋಳದ
ಜತೆಗೆ ಕಂಗಾಲಾಗಿ ಕೂತಿದ್ದ
ನಿನ್ನ ಚಿತ್ರಾನೂ ಮುಖಪುಟದಾಗೆ
ನೋಡ್ದೆ ಕಣಪ್ಪಾ

ಅಲ್ಲಾ ಕಣಪ್ಪಾ…
ಭಾರತಾಂಬೆಯ ಬೆನ್ನೆಲುಬು
ಅಂತ ಯಾಮಾರಿ ಕುಂತಿದ್ಯಲ್ಲಾ
ಈಗ ನೋಡು…
ನೀ ಯಾರ ಅಂತ
ಕೇಳೋರು ಇಲ್ಲ…

ನೀ ಹತ್ತು ಪೈಸೆಗೆ ಮಾರೋದನ್ನ
ಹತ್ತು ರೂಪಾಯಿಗೆ ತಕ್ಕೊಳೋ
ನಾ ಹೇಳ್ತೀನಿ ಕೇಳು…

ನೀ ಹದರಬೇಡ
ಇಲಿ ಪಾಷಾಣ
ಕೀಟ ನಾಶಕ ಕುಡ್ದು
ಜೀವ ತಕ್ಕೊಬ್ಯಾಡ

ಭೂಮಿ-ಕಾಣಿ, ಮಳೆ-ಬೇಳೆ
ಎಲ್ಲಾ ಮರ್‍ತು ಬಿಡು
ನೀ ಬಿತ್ತೋದೂ ಬ್ಯಾಡ
ನೀ ಬೆಳೆಯೋದೂ ಬ್ಯಾಡ
ಕೈ ಕೆಸರು ಮಾಡಿಕೊಳ್ಳೋದೂ ಬ್ಯಾಡ
ಬೆವರ ಸುರಿಸೋದೂ ಬ್ಯಾಡ
ನುಸಿ ಪೀಡೆ, ಕೀಟ ಬಾಧೆ, ಪೇಟೆ ಧಾರಣೆ
ಅಂತ ತಲೆಕೆಡಿಸಿಕೊಳ್ಳಬ್ಯಾಡ
ಅಕ್ಕಿ, ರಾಗಿ, ಕೊತ್ತಿಮಿರಿ, ಕರಿಬೇವು
ಎಲ್ಲಾ ಅಮೇರಿಕಾದಿಂದ ಬರುತ್ತೆ
ನೀ ಸುಮ್ಕಿದ್ದು ಬಿಡು ಆರಾಮ…

ಆ ಹಳೆ ಪಂಚೆ
ಹರಕಲು ಚಡ್ಡಿ
ಹವಾಯಿ ಚಪ್ಪಲಿ
ಮೋಟು ಬೀಡಿ ಮೊದ್ಲು ಬಿಸಾಕು
ಜೀನ್ಸ್ ಪ್ಯಾಂಟು, ರಂಗೀಲಾ ಷರಟು
ಮೊದ್ಲು ತೊಟ್ಕೊ…

ಪಿಜ್ಜಾ ತಿನ್ನು, ಕೋಲಾ ಕುಡಿ
ಪ್ಯಾಕ್‌ನಲ್ಲಿ ಮಡಗಿರೋ
ಚಿಕನ್ನು, ಮಟನ್ನು ತಿಂದು
ಪಾಪು, ರ್‍ಯಾಪು ಕೇಳ್ತಾ
ಟಿ. ವಿ. ನಲ್ಲಿ W.W.F ನೋಡ್ತಾ ಮೊಬೈಲ್‌ನಲ್ಲಿ ಕಷ್ಟ-ಸುಖ
ಇಚಾರಿಸ್ತ ಸುಮ್ಕಿದ್ದು ಬಿಡು ಆರಾಮ…
ಹಾಂ… ಹಾಗೆ… ಹಾಗೆ…
ನೋಡ್ತಾ ಇರು ಹ್ಯಾಗೆ
ಹ್ಯಾಗೆ ಆಗುತ್ತೆ ಮ್ಯಾಜಿಕ್ಕು!
ನಿನ್ನೂರು ಮಂಗಾಪುರ ಅಲ್ವಾ?
ಈಗ ನೋಡು…
ಹ್ಯಾಗೆ ಆಗಿದೆ ಸಿಂಗಾಪುರ!

ನೋಡ್ತಾ ಇರು…
ಹೈಟೆಕ್ ಆಸ್ಪತ್ರೆ ಬತ್ತದೆ
ಯಮಗಾತ್ರ ಪವರ್ ಪ್ರಾಜೆಕ್ಟ್ ಬಂದು
ರಾತ್ರಿ-ಹಗಲು ದೀಪ ಉರೀತದೆ
ಕುಡಿಯೋ ನೀರು ಬಾಟ್ಲಿನಲ್ಲಿ
ತಂತಾನೆ ತುಂಬ್ಕೊಂಡು
ಮನೆ ಬಾಗಿಲಿಗೆ ಬಂದು ಬೀಳ್ತದೆ

ಎತ್ತಿನ ಬಂಡಿಗಳು
ಏರೋಪ್ಲೇನ್ ಥರಾ ಹಾರ್‍ಕೋತ
ಸೀದಾ ದಿಲ್ಲಿಗೇ ಹೋಗ್ಬೇಕು
ಆಪಾಟಿ ರಸ್ತೆಗೋಳು ಬತ್ತವೆ
ನಿನ್ನ ಮಕ್ಕಳು, ಮರಿಮಕ್ಕಳು
ದೊಡ್ಡ ದೊಡ್ಡ ಶಾಲೆಗೆ ಹೋಗ್ತಾವೆ
ಎ. ಬಿ. ಸಿ. ಡಿ ಕಲಿತಾವೆ
ಅಮೆರಿಕೆಗೆ ಹಾರಿ
ಕೊಪ್ಪರಿಗೆ ಹಣ ಬಾಚ್ತಾವೆ…

ಹಬ್ಬೆಟ್ಟು-ಛಾಪಾಕಾಗದ
ಸಾಲ, ಬಡ್ಡಿ, ಜಪ್ತಿ
ಉಹುಂ ಕನಸಿನಲ್ಲೂ ಯೋಚಿಸಬ್ಯಾಡ
ನೀ…ರಾಮ-ಕೃಷ್ಣ ಅನ್ನೋದು ಬ್ಯಾಡ
ಕಂಪ್ಯೂಟರ್ ದೇವತೆ
ನಿನ್ನ ಮೈಮ್ಯಾಲೆ ಬಂದು
ಖಂಡಿತ ಮೋಕ್ಷ ಕಾಣಿಸ್ತಾಳ…

ಅದಕ್ಕೆ ಕಣಪ್ಪಾ ನಾ ಹೇಳ್ತೀನೀ ಕೇಳು…
ನೀ ಸುಮ್ಕಿದ್ದು ಬಿಡು…
ಬಾಯ್ ಮುಚ್ಕೊಂಡು… ಕಿವಿ ಮುಚ್ಕೊಂಡು…
ಕಣ್ಣು ಮುಚ್ಕೊಂಡು…

ಹಾಂ ಹಾಗೆ… ಹಾಗೆ…
ಉಸಿರೆತ್ತಬ್ಯಾಡ….
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭ್ರಮಣ – ೧೦
Next post ಇರು

ಸಣ್ಣ ಕತೆ

 • ಆ ರಾತ್ರಿ

  ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

 • ಬೋರ್ಡು ಒರಸುವ ಬಟ್ಟೆ

  ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…

 • ಯಾರು ಹೊಣೆ?

  "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

 • ಅಹಮ್ ಬ್ರಹ್ಮಾಸ್ಮಿ

  ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

 • ಕಲ್ಪನಾ

  ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…